-ಪ್ರಕಾಶ್ ಸಾಮಗ 

ಕೋಸ್ಟಲ್ ಟಾಕ್ ನ್ಯೂಸ್ | ಬ್ರಹ್ಮಾವರ 

ಕೆಲವು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಜನರು ಪಾಸ್‌ಪೋರ್ಟ್ ಸೇವೆ ಪಡೆಯಲು ಮಂಗಳೂರಿಗೆ ತೆರಳಬೇಕಿತ್ತು. 2018ರ ಮಾರ್ಚ್ 5ರಂದು ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭವಾದ ಬಳಿಕ ಈ ಸೇವೆ ಸ್ಥಳೀಯರ ಮನೆಬಾಗಿಲಿಗೆ ತಲುಪಿದ್ದು, ಜನರ ಹೊರೆ ಈಗ ಕಡಿಮೆಯಾಗಿದೆ. 

ಬ್ರಹ್ಮಾವರ ಅಂಚೆ ಕಚೇರಿಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. 2026ರ ಜನವರಿಯಿಂದ ಸೆಪ್ಟೆಂಬರ್ 22ರವರೆಗೆ 5,499 ಹೊಸ ಪಾಸ್‌ಪೋರ್ಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 5,193 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ ಎಂದು ಅಧಿಕೃತ ಮೂಲಗಳು coastaltalknews.com ಗೆ ತಿಳಿಸಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಂಚೆ ಇಲಾಖೆಯ ಜಂಟಿ ಸೌಕರ್ಯವಾಗಿರುವ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (PoPSK), ಅಂಚೆ ಕಚೇರಿಗಳ ಮೂಲಕ ಜನರಿಗೆ ಪಾಸ್‌ಪೋರ್ಟ್ ಸೇವೆ ಒದಗಿಸುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಕಚೇರಿಗಳ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪ್ರಯತ್ನಕ್ಕೆ ಇದು ಉದಾಹರಣೆಯಾಗಿದೆ.

ಬ್ರಹ್ಮಾವರ ಕೇಂದ್ರದಲ್ಲಿ 2024ರಲ್ಲಿ 6,287 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, 6,085 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ. 2025ರಲ್ಲಿ 6,011 ಹೊಸ ಅರ್ಜಿಗಳು ಸಲ್ಲಿಕೆಯಾಗಿದ್ದು, 5,822 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ. 

ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ
ಬ್ರಹ್ಮಾವರದಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ

ಪಾಸ್‌ಪೋರ್ಟ್ ಮರುವಿತರಣೆಗೆ ಸಂಬಂಧಿಸಿದ ಅರ್ಜಿಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. 2024ರಲ್ಲಿ 4,258 ಮರುವಿತರಣೆ ಅರ್ಜಿಗಳು ಸ್ವೀಕೃತವಾಗಿ 4,028 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ. 2025ರಲ್ಲಿ 4,044 ಅರ್ಜಿಗಳು ಬಂದಿದ್ದು, 4,054 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ. 2026ರ ಸೆಪ್ಟೆಂಬರ್ 22ರವರೆಗೆ 3,639 ಮರುವಿತರಣೆ ಅರ್ಜಿಗಳು ಸ್ವೀಕೃತವಾಗಿದ್ದು, 3,463 ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿದೆ. ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಸಾಮಾನ್ಯ ಪಾಸ್‌ಪೋರ್ಟ್‌ಗಳಿಗೆ ಮಾತ್ರ ಅರ್ಜಿ ಸ್ವೀಕರಿಸಿ ವಿತರಿಸಲಾಗುತ್ತದೆ. ತತ್ಕಾಲ್ ಪಾಸ್‌ಪೋರ್ಟ್‌ಗಳನ್ನು ಇಲ್ಲಿ ವಿತರಿಸಲಾಗುವುದಿಲ್ಲ.