ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು
ಮಂಗಳೂರು ನಗರದ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನು ಸಾಗಾಟ ವಾಹನಗಳಿಂದ ತ್ಯಾಜ್ಯ ನೀರು ಸೋರಿಕೆಯಾಗುತ್ತಿದ್ದು, ಇದರಿಂದ ದುರ್ವಾಸನೆ ಹರಡುವುದರ ಜೊತೆಗೆ ಇತರ ವಾಹನ ಸವಾರರಿಗೆ ರಸ್ತೆಗಳಲ್ಲಿ ಸಂಚರಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ.
ಮೀನುಗಾರಿಕಾ ಬಂದರಿನಿಂದ ಮೀನು ಸಾಗಿಸುವ ಹಲವು ಲಾರಿಗಳು ಹಾಗೂ ಮಿನಿ ಗೂಡ್ಸ್ ವಾಹನಗಳು ಸೂಕ್ತ ತ್ಯಾಜ್ಯ ನೀರು ಸಂಗ್ರಹಣಾ ಟ್ಯಾಂಕ್ಗಳಿಲ್ಲದೆ ಸಂಚರಿಸುತ್ತಿವೆ. ಪರಿಣಾಮವಾಗಿ ಬಂದರಿನಿಂದ ಹೊರಟ ವಾಹನಗಳು ಸಾಗುವ ಮಾರ್ಗದುದ್ದಕ್ಕೂ ರಸ್ತೆಯ ಮೇಲೆ ನೀರು ಸೋರಿಕೆಯಾಗುತ್ತಿದೆ. ಮಣ್ಣಗುಡ್ಡ–ಕುಳೂರು ಫೆರ್ರಿ ರಸ್ತೆಯ ಹಲವು ಭಾಗಗಳಲ್ಲಿ ತೀವ್ರ ದುರ್ವಾಸನೆ ಹರಡುತ್ತಿದೆ. ಆಗಸ್ಟ್ನಲ್ಲಿ ಮೀನುಗಾರಿಕೆ ಋತು ಆರಂಭವಾದಾಗಿನಿಂದ ಈ ಸಮಸ್ಯೆ ಮುಂದುವರಿದಿದೆ ಎಂದು ಮಂಗಳೂರಿನ ನಾಗರಿಕರು ತಿಳಿಸಿದ್ದಾರೆ.
ತ್ಯಾಜ್ಯ ನೀರಿನಿಂದ ರಸ್ತೆ ಜಾರುವಂತಾಗಿ ಇತರ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ. ಇಷ್ಟಾದರೂ ಹಲವು ಮೀನು ಸಾಗಾಟ ವಾಹನಗಳಲ್ಲಿ ಅಗತ್ಯವಾದ ತ್ಯಾಜ್ಯ ನೀರು ಸಂಗ್ರಹಣಾ ಟ್ಯಾಂಕ್ಗಳಿಲ್ಲ.
ಈ ವರ್ಷ ರಸ್ತೆಗಳಲ್ಲಿ ಮೀನು ತ್ಯಾಜ್ಯ ನೀರು ಸೋರಿಕೆ ಮಾಡಿದ ವಾಹನಗಳ ವಿರುದ್ಧ ಮಂಗಳೂರು ನಗರ ಪೊಲೀಸರು 604 ಪ್ರಕರಣಗಳನ್ನು ದಾಖಲಿಸಿ, ₹3.02 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರಕರಣಗಳ ಸಂಖ್ಯೆ ಶೇ.30ಕ್ಕಿಂತಲೂ ಹೆಚ್ಚಾಗಿದೆ. ವಾಹನಗಳಲ್ಲಿ ನೀರು ಸೋರಿಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ಕೆಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸುವ ಕುರಿತು ಫ್ಲೆಕ್ಸ್ ಫಲಕಗಳನ್ನು ಅಳವಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಮಸ್ಯೆಯನ್ನು ತಡೆಗಟ್ಟಲು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. “ಜನರು ಕಾನೂನು ಉಲ್ಲಂಘಿಸುವುದನ್ನು ತಮ್ಮ ಹಕ್ಕು ಎಂದು ಭಾವಿಸಬಾರದು. ಉಲ್ಲಂಘನೆಯನ್ನು ಸಮರ್ಥಿಸಿಕೊಳ್ಳುವುದರಿಂದ ಇತರರೂ ಅದೇ ರೀತಿ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ’’ ಎಂದು ತಿಳಿಸಿದ್ದಾರೆ.