AI–ಡಿಜಿಟಲ್ ತಂತ್ರಜ್ಞಾನದಿಂದ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ
ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಸುಸ್ಥಿರ, ಪ್ರವಾಸಿಗ ಸ್ನೇಹಿ ಹಾಗೂ ಆಕರ್ಷಕವಾಗಿ ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಾಗೌರಿ ವಿ. ಭಟ್ ಹೇಳಿದರು. ಅವರು ಭಾನುವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ–2026ರ ಅಂಗವಾಗಿ ಕಾಸರಕೋಡು ಇಕೋ ಬೀಚ್ ನಲ್ಲಿ ಆಯೋಜಿಸಿದ್ದ ವಿವಿಧ ಜಾಗೃತಿ ಕಾರ್ಯಕ್ರಮಗಳು ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯು ಅಪಾರ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಸಾಹಸ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಹೊಂದಿದೆ. ಜಿಲ್ಲೆಯ ಕಡಲತೀರಗಳು, ಜಲಪಾತಗಳು, ವನ್ಯಜೀವಿ ತಾಣಗಳು, ಕೋಟೆಗಳು ಹಾಗೂ ಸ್ಥಳೀಯ ಆಹಾರ ಮತ್ತು ಕರಕುಶಲ ಉತ್ಪನ್ನಗಳನ್ನು ದೇಶ-ವಿದೇಶದ ಪ್ರವಾಸಿಗರಿಗೆ ತಲುಪಿಸಲು ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಗಣೇಶ ನಾಯ್ಕ ಅವರು ‘ಡಿಜಿಟಲ್ ತಂತ್ರಜ್ಞಾನ ಮತ್ತು AI ಸದ್ಬಳಕೆ ಹಾಗೂ ಸುಸ್ಥಿರ ಪ್ರವಾಸೋದ್ಯಮ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಿಜಿಟಲ್ ಅಜೆಂಡಾ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರವಾಸೋದ್ಯಮದ ಮರುಸೃಷ್ಟಿ’ ಎಂಬ ಆಶಯದಡಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಮಾಹಿತಿ ವ್ಯವಸ್ಥೆ, ಸ್ಮಾರ್ಟ್ ಸೇವೆಗಳು ಹಾಗೂ AI ತಂತ್ರಜ್ಞಾನದ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು. ಪ್ರವಾಸಿಗರಿಗಾಗಿ ವಿವಿಧ ಮನರಂಜನಾ ಕ್ರೀಡಾ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿತ್ತು.
‘ಸ್ವಚ್ಛ ಪ್ರವಾಸಿ ತಾಣ–ಸುಸ್ಥಿರ ಪ್ರವಾಸೋದ್ಯಮ’ ಪರಿಕಲ್ಪನೆಯಡಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಗೋಕರ್ಣ ಮುಖ್ಯ ಕಡಲತೀರ, ಮುರುಡೇಶ್ವರ ಕಡಲತೀರ, ಸಹಸ್ರಲಿಂಗ ಹಾಗೂ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ತೆರವುಗೊಳಿಸಿ, ತ್ಯಾಜ್ಯ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪ್ರವಾಸಿಗರು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು
ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಕಿರಣ ಕುಮಾರ ಎಂ.ಜೆ., ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ರಮೇಶ ಮೇಸ್ತಾ, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ, ಸ್ಥಳೀಯ ಸಾರ್ವಜನಿಕರು ಹಾಗೂ ಪ್ರವಾಸೋದ್ಯಮ ಉದ್ಯಮದ ಪಾಲುದಾರರು ಭಾಗವಹಿಸಿದ್ದರು.