ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಪ್ರತಿದಿನವೆಂಬಂತೆ ಬೀದಿ ನಾಯಿಗಳ ಕಾಟದ ಬಗ್ಗೆ ಹತ್ತಾರು ದೂರುಗಳನ್ನುತಾವು ಸ್ವೀಕರಿಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಪ್ರಾಣಿ ದಯಾ ಸಂಘಟನೆಗಳ ಸ್ಪಂದನೆ ಮತ್ತು ಸಹಕಾರದ ಕೊರತೆ ಇದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳ ಸಂತಾನ ಶಕ್ತಿಹರಣ ಗೊಳಿಸುವ ಕಾರ್ಯಕ್ರಮಕ್ಕೆ ಹೇರಳವಾದ ಅನುದಾನಗಳು ಬರುತ್ತಿದ್ದು ಅವುಗಳನ್ನು ಹಿಡಿಯುವ ಪ್ರಕ್ರಿಯೆಗೆ ಸಿಬ್ಬಂದಿಗಳು ದೊರಕುತ್ತಿಲ್ಲ, ಜಿಲ್ಲಾಡಳಿತವು ಅವುಗಳನ್ನು ಹಿಡಿಯಲು ತರಬೇತಿ ನೀಡಲು ಕೂಡ ಸಿದ್ದವಾಗಿದ್ದು ಅದಕ್ಕೂ ಮಾನವ ಸಂಪನ್ಮೂಲಗಳು ದೊರಕುತ್ತಿಲ್ಲ. ಹಾಗೆಯೇ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಯಾವುದೇ ಪ್ರಾಣಿ ದಯಾ ಸಂಘಟನೆಗಳು ಜಿಲ್ಲಾಡಳಿತಕ್ಕೆ ಈ ಬಗ್ಗೆ ಸಲಹೆ ನೀಡುವುದು ಬಿಟ್ಟರೆ ಸಹಕಾರಕ್ಕಾಗಿ ಮುಂದೆ ಬರುತ್ತಿಲ್ಲ. ಕೇಂದ್ರ ಸರ್ಕಾರದ ಇದಕ್ಕೆ ಸಂಬಂಧಪಟ್ಟ ಸಂಸ್ಥೆಯಲ್ಲಿ ಒಂದು ಪ್ರಾಣಿದಯಾ ಸಂಘಟನೆ ಕೂಡ ನೋಂದಾಯಿತರಾಗದೆ ಇರುವುದು ನಮಗೆ ಇಕ್ಕಟ್ಟಿನ ಪರಿಸ್ಥಿತಿ ತಂದಿದೆ ಎಂದು ತಮ್ಮನ್ನು ಭೇಟಿಯಾದ ಉಡುಪಿ ನಗರ ಬಿಜೆಪಿಯ ನಿಯೋಗಕ್ಕೆ ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ ಕೆ ಅವರು ತಿಳಿಸಿದರು.
ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಡಳಿತವು ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ಉಡುಪಿ ನಗರ ಬಿಜೆಪಿ ಮತ್ತು ನಿಕಟ ಪೂರ್ವ ನಗರಸಭಾ ಸದಸ್ಯರು ಹಾಗೂ ಶಾಸಕರು ಜಿಲ್ಲಾಡಳಿತದೊಂದಿಗೆ ಜೋಡಿಸಲಿದ್ದಾರೆ ಎಂದು ನಿಯೋಗವು ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿತು. ಉಡುಪಿ ನಗರ ಬಿಜೆಪಿಯ ಪ್ರಮುಖರು ಮತ್ತು ನಿಕಟಪೂರ್ವ ನಗರಸಭಾ ಸದಸ್ಯರು ಹಾಜರಿದ್ದರು.