-ಪ್ರಕಾಶ್ ಸಾಮಗ 

ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು 

ಮಂಗಳೂರಿನ ನವ ಮಂಗಳೂರು ಬಂದರಿನಲ್ಲಿ ₹827.64 ಕೋಟಿ ವೆಚ್ಚದ ಎರಡು ಯೋಜನೆಗಳು ಸಾರ್ವಜನಿಕ ಮೂಲಸೌಕರ್ಯಕ್ಕೆ ಖಾಸಗಿ ಹೂಡಿಕೆ ಆಕರ್ಷಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಹೊಸ ದಿಕ್ಕು ನೀಡುವ ಸಾಧ್ಯತೆಯಿದೆ. ಈ ಎರಡೂ ಯೋಜನೆಗಳು ಖಾಸಗಿ ಸಹಭಾಗಿತ್ವದ ಮೂಲಕ ಅನುಷ್ಠಾನಗೊಳ್ಳುವ ಪ್ರಸ್ತಾವನೆಗಳಾಗಿದ್ದು, ಈ ಕುರಿತು ಬಂದರು ಪ್ರಾಧಿಕಾರದಿಂದ ಕೋಸ್ಟಲ್ ಟಾಕ್ ನ್ಯೂಸ್ ಗೆ ಮಾಹಿತಿ ಲಭ್ಯವಾಗಿದೆ. ಈ ಯೋಜನೆಗಳನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‌ಲೈನ್‌ (NMP) ಅಡಿಯಲ್ಲಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆ ಇದೆ. 

ಈ ಯೋಜನೆಗಳಲ್ಲಿ 17ನೇ ಬರ್ತ್‌ನಲ್ಲಿ ಬಹುಉದ್ದೇಶದ ಸರಕು ನಿರ್ವಹಣಾ ಟರ್ಮಿನಲ್ ನಿರ್ಮಿಸುವ ಯೋಜನೆಯ ಅಂದಾಜು ವೆಚ್ಚ ₹389.35 ಕೋಟಿ, ಹಾಗೂ 9ನೇ ಬರ್ತ್‌ ಅನ್ನು ಖಾಸಗಿ ನಿರ್ವಹಣೆಗೆ ವಹಿಸುವ ಮತ್ತೊಂದು ಯೋಜನೆಯ ಅಂದಾಜು ವೆಚ್ಚ ಬಡ್ಡಿ ಸೇರಿದಂತೆ ₹438.29 ಕೋಟಿ. ಎರಡೂ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದು ಅಧಿಕೃತ ಮೂಲಗಳು ಕೋಸ್ಟಲ್ ಟಾಕ್ ನ್ಯೂಸ್‌ಗೆ ತಿಳಿಸಿವೆ.

ನವ ಮಂಗಳೂರು ಬಂದರು
ನವ ಮಂಗಳೂರು ಬಂದರು

ಆಸ್ತಿ ನಗದೀಕರಣ ಯೋಜನೆಯಡಿ ಸಾರ್ವಜನಿಕ ಮೂಲಸೌಕರ್ಯದ ಮಾಲೀಕತ್ವವನ್ನು ಸರ್ಕಾರವೇ ಉಳಿಸಿಕೊಂಡು, ನಿರ್ದಿಷ್ಟ ಅವಧಿಗೆ ಅದರ ಬಳಕೆ ಅಥವಾ ನಿರ್ವಹಣೆಯ ಹಕ್ಕನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುತ್ತದೆ. ಇದರಿಂದ ಸಾರ್ವಜನಿಕ ಆಸ್ತಿಗಳ ಮೌಲ್ಯವನ್ನು ಬಳಸಿಕೊಂಡು ಹೊಸ ಮೂಲಸೌಕರ್ಯ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಡೀಕರಿಸುವ ಉದ್ದೇಶವಿದೆ. 

ಆದರೆ, ಈ ಎರಡು ಯೋಜನೆಗಳ ಪ್ರಸ್ತುತ ಪ್ರಗತಿಯಲ್ಲಿ ವ್ಯತ್ಯಾಸವಿದೆ. 17ನೇ ಬರ್ತ್ ಯೋಜನೆಯನ್ನು ಬಂದರಿನ ಸ್ವಂತ ಬಂಡವಾಳ ವೆಚ್ಚದ (CAPEX) ನಿಧಿಯ ಮೂಲಕ ಕೈಗೆತ್ತಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ನವ ಮಂಗಳೂರು ಬಂದರು ಪ್ರಾಧಿಕಾರ (NMPA) 2026ರ ಫೆಬ್ರವರಿ 2ರಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ತಿಳಿಸಿದೆ. ನವ ಮಂಗಳೂರು ಬಂದರು ಸ್ಟೀವಡೋರ್‌(ಬಂದರಿನಲ್ಲಿ ಹಡಗುಗಳಿಗೆ ಸರಕುಗಳನ್ನು ಲೋಡ್ ಮಾಡಲು, ಇಳಿಸುವ ಜವಾಬ್ದಾರಿ ಹೊಂದಿರುವ ಗುತ್ತಿಗೆ ಸಂಸ್ಥೆ) ಗಳ ಸಂಘವು ಈ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಸಚಿವಾಲಯವು 2025ರ ಡಿಸೆಂಬರ್‌ನಲ್ಲಿ ಸ್ಥಿತಿಗತಿ ವರದಿ ಕೇಳಿತ್ತು. 

9ನೇ ಬರ್ತ್ ಯೋಜನೆಯ ಪ್ರಸ್ತಾವನೆಯನ್ನು 2026ರ ಜನವರಿ 30ರಂದು ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ಪರಿಷ್ಕೃತ ಟೆಂಡರ್ ಅಧಿಸೂಚನೆ ಸೇರಿದಂತೆ ಸಂಬಂಧಿತ ದಾಖಲೆಗಳು ಅನುಮೋದನೆಗಾಗಿ ಸಲ್ಲಿಕೆಯಾಗಿವೆ. ತಾಂತ್ರಿಕ ಬಿಡ್‌ಗಳನ್ನು 2026ರ ಮೇ 29ರಂದು ತೆರೆಯಲು ನಿಗದಿಪಡಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬುದನ್ನು ಬಂದರು ಪ್ರಾಧಿಕಾರ ದೃಢಪಡಿಸಿಲ್ಲ. 

ರಾಷ್ಟ್ರೀಯ ಆಸ್ತಿ ನಗದೀಕರಣ ಪೈಪ್‌ಲೈನ್‌ನ ಉದ್ದೇಶವು ಅಸ್ತಿತ್ವದಲ್ಲಿರುವ ಸಾರ್ವಜನಿಕ ಮೂಲಸೌಕರ್ಯಗಳ ಮೌಲ್ಯವನ್ನು ಬಳಸಿಕೊಂಡು ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವುದಾಗಿದೆ. ಈ ಮೂಲಕ ಸಂಪನ್ಮೂಲಗಳನ್ನು ಹೊಸ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ನಿರೀಕ್ಷೆಯಿದೆ. ಸರಕಾರ ಈಗಾಗಲೇ ಹೂಡಿಕೆ ಮಾಡಿರುವ ಆಸ್ತಿಗಳಲ್ಲಿ ಖಾಸಗಿ ವಲಯಕ್ಕೆ ಬಂಡವಾಳ ಹೂಡಿಕೆಗೆ ಮುಕ್ತವಾಗಿಸುವುದು, ಅದರ ಮೂಲಕ ಹಣ ಸಂಗ್ರಹಿಸಿ ಮತ್ತಷ್ಟು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಬಂಡವಾಳವನ್ನು ಕ್ರೋಢೀಕರಿಸುವುದು ಇದರ ಉದ್ದೇಶ.