ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ 

ಪ್ಲಾಸ್ಟಿಕ್ ತ್ಯಾಜ್ಯ ಇಂದು ಜಗತ್ತು ಎದುರಿಸುತ್ತಿರುವ ಬಹುದೊಡ್ಡ ಪರಿಸರ ಸವಾಲುಗಳಲ್ಲಿ ಒಂದಾಗಿದ್ದು, ವಿಶೇಷವಾಗಿ ಕರಾವಳಿ ಪ್ರದೇಶಗಳು ಹಾಗೂ ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಗಂಭೀರ ಪರಿಣಾಮ ಬೀರುತ್ತಿದೆ. ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಜಲಚರಗಳ ಜೀವಕ್ಕೆ ಅಪಾಯ ತಂದೊಡ್ಡುವುದರ ಜೊತೆಗೆ ಸಮುದ್ರದ ಜೀವವೈವಿಧ್ಯಕ್ಕೂ ಧಕ್ಕೆ ಉಂಟುಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕಾರವಾರದ ಅರಣ್ಯ ಇಲಾಖೆಯ ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ವಿಭಾಗವು 22 ದಿನಗಳಲ್ಲಿ ಸುಮಾರು 4,000 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿರುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಸಾಧನೆಯಾಗಿದೆ.

ಪ್ಲಾಸ್ಟಿಕ್ ಮುಕ್ತ ಕರಾವಳಿ, ಸ್ವಚ್ಛ ಸಮುದ್ರ ಮತ್ತು ಸುರಕ್ಷಿತ ಸಮುದ್ರ ಜೀವವೈವಿಧ್ಯ ಎಂಬ ಗುರಿಯೊಂದಿಗೆ ಆಗಸ್ಟ್ 2026 ರಲ್ಲಿ ಕಾರವಾರದ ಮಾಜಾಳಿಯಿಂದ ಅಂಕೋಲದವರೆಗಿನ ಸಮುದ್ರ ತೀರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಯವನ್ನು ಆರಂಭಿಸಿದ ಅರಣ್ಯ ಇಲಾಖೆಯ ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ವಿಭಾಗವು 3 ತಿಂಗಳ ಅವಧಿಯಲ್ಲಿನ 22 ದಿನಗಳ ಕಾಯಾಚರಣೆಯ ಮೂಲಕ 4,000 ಕೆ.ಜಿ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿದ್ದು, ಈ ಎಲ್ಲಾ ತ್ಯಾಜವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸಂಬOದಪಟ್ಟ ನಗರಸ್ಥಳಿಯ ಸಂಸ್ಥೆಗಳಿಗೆ ಸೂಕ್ತ ರೀತಿಯಲ್ಲಿ ವಿಂಗಡಿಸಿ, ಹಸ್ತಾಂತರ ಮಾಡಿದೆ.

ಅರಣ್ಯ ಇಲಾಖೆಯ ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡವು ನಿಯಮಿತವಾಗಿ ಪ್ರತೀ ವಾರ ಒಂದೊoದು ಬೀಚ್ ನಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದು, ಇದಲ್ಲದೇ ವಿವಿಧ ಸಂಘ ಸಂಸ್ಥೆಗಳು ಬೀಚ್ ನಲ್ಲಿ ನಡೆಸುವ ಸ್ವಚ್ಛತಾ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಪರಿಸರ ಸಂರಕ್ಷಣೆಗೆ ತಮ್ಮ ನೆರವು ನೀಡುತ್ತಿದ್ದು, ತಮ್ಮ ತಂಡದ ಕಾರ್ಯಚಟುವಟಿಕೆಯನ್ನೂ ಪ್ರತೀ ವಾರ ಯಾವುದೇ ಅಡತಡೆ ಇಲ್ಲದೇ ನಡೆಸುತ್ತಿರುವುದು ಗಮನಾರ್ಹವಾಗಿದೆ.

ಕರಾವಳಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚೀಲಗಳು, ಆಹಾರ ಪೊಟ್ಟಣಗಳು ಹಾಗೂ ಇತರ ತ್ಯಾಜ್ಯಗಳು ರಾಶಿಯಾಗಿ ಸಂಗ್ರಹವಾಗುವುದರಿOದ ಸಮುದ್ರ ಪರಿಸರದ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ. ಈ ತ್ಯಾಜ್ಯಗಳು ಸಮುದ್ರದ ಅಲೆಗಳ ಮೂಲಕ ದೂರದ ಪ್ರದೇಶಗಳಿಗೆ ಹರಡುತ್ತಿದ್ದು, ಮೀನುಗಳು, ಆಮೆಗಳು ಹಾಗೂ ಇತರ ಸಮುದ್ರ ಜೀವಿಗಳ ಬದುಕಿಗೆ ಅಪಾಯವನ್ನುಂಟುಮಾಡುತ್ತಿವೆ. ಪ್ಲಾಸ್ಟಿಕ್ ಸಣ್ಣ ತುಣುಕುಗಳಾಗಿ ವಿಭಜನೆಯಾದಾಗ ಉಂಟಾಗುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಆಹಾರ ಸರಪಳಿಯನ್ನೂ ಪ್ರವೇಶಿಸುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ಸಿಬ್ಬಂದಿಗಳ ಕಾರ್ಯ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಕಾರ್ಯ ಪರಿಸರದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವ ಪಡೆದಿದೆ. ಇದುವರೆಗಿನ ತ್ಯಾಜ್ಯ ಸಂಗ್ರಹಣೆಯು ಕೇವಲ ಅಂಕಿ-ಅOಶವಲ್ಲ ಮಾತ್ರವಾಗಿರದೇ ಕರಾವಳಿ ಪರಿಸರವನ್ನು ಸ್ವಚ್ಛವಾಗಿಡಲು ಕೈಗೊಂಡಿರುವ ನಿರಂತರ ಪ್ರಯತ್ನದ ಪ್ರತೀಕವಾಗಿದೆ.

ಪ್ಲಾಸ್ಟಿಕ್ ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೇವಲ ತ್ಯಾಜ್ಯ ಸಂಗ್ರಹಿಸುವುದಷ್ಟೇ ಸಾಕಾಗುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಮರುಬಳಕೆಗೆ ಆದ್ಯತೆ ನೀಡುವುದು ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಿರುವ ಅಭ್ಯಾಸ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಪ್ರವಾಸಿಗರು, ಮೀನುಗಾರರು, ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳು ಪರಿಸರ ಸ್ನೇಹಿ ನಡವಳಿಕೆಯನ್ನು ಅಳವಡಿಸಿಕೊಂಡಾಗ ಮಾತ್ರ ಇಂತಹ ಪ್ರಯತ್ನಗಳಿಗೆ ಶಾಶ್ವತ ಫಲ ದೊರೆಯಲಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರಕ್ಕೆ ಸೇರದಂತೆ ತಡೆಯುವುದು, ತ್ಯಾಜ್ಯ ವಿಂಗಡಣೆ ಮಾಡುವುದು ಮತ್ತು ಪರಿಸರ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದ್ದು, ಕರಾವಳಿ ಮತ್ತು ಸಮುದ್ರ ಪರಿಸರದ ಸಂರಕ್ಷಣೆ ಸರ್ಕಾರ ಅಥವಾ ಒಂದು ಸಂಸ್ಥೆಯ ಜವಾಬ್ದಾರಿ ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. 

ಪ್ಲಾಸ್ಟಿಕ್ ಮುಕ್ತ ಕರಾವಳಿ, ಸ್ವಚ್ಛ ಸಮುದ್ರ ಮತ್ತು ಸುರಕ್ಷಿತ ಸಮುದ್ರ ಜೀವವೈವಿಧ್ಯ ಎಂಬ ಗುರಿ ಸಾಧಿಸಲು ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಮತ್ತು ಕಾರವಾರ ಮತ್ತು ಅಂಕೋಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರಂಭಗೊoಡ ನಮ್ಮ ತಂಡದಲ್ಲಿನ ವಲಯ ಅರಣ್ಯಾಧಿಕಾರಿಗಳು, ಉಪ ಅವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರು ನಿರಂತರವಾಗಿ ಬೀಚ್‌ಗಳಲ್ಲಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ಲಾಸ್ಟಿಕ್ ಮುಕ್ತ ಕರಾವಳಿಗೆ ಶ್ರಮಿಸುತ್ತಿದ್ದಾರೆ. ಬೀಚ್ ಗಳಿಗೆ ಆಗಮಿಸುವ ಪ್ರವಾಸಿಗರು ಬೀಚ್ ಸೌಂದರ್ಯವನ್ನು ಆನಂದಿಸುವುದರ ಜೊತೆಗೆ ತಮ್ಮೊಂದಿಗೆ ತರುವ ಪ್ಲಾಸ್ಟಿಕ್ ಸೇರಿದಂತೆ ಇತರೆ ಆಹಾರ ಪದಾರ್ಥಗಳ ತ್ಯಾಜ್ಯಗಳನ್ನು ಸ್ವಯಂ ಪ್ರೇರಣೆಯಿಂದ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಸಣ್ಣ ಪರಿಸರ ಕಾಳಜಿಯೇ, ಮುಂದಿನ ಪೀಳಿಗೆಗೆ ಸ್ವಚ್ಛ ಹಾಗೂ ಸುಂದರ ಪ್ರಕೃತಿಯನ್ನು ಉಳಿಸಿಕೊಡುವ ದೊಡ್ಡ ಕೊಡುಗೆಯಾಗಲಿದೆ, ಎನ್ನುತ್ತಾರೆ ಗಜಾನನ ಎಸ್ ನಾಯ್ಕ, ವಲಯ ಅರಣ್ಯಾಧಿಕಾರಿ, ಕೋಸ್ಟಲ್ ಅಂಡ್ ಮರೈನ್ ಇಕೋ ಸಿಸ್ಟಮ್ ಸೆಲ್, ಕಾರವಾರ.