ರೂ. 21 ಲಕ್ಷ ಪಾವತಿ, ಆದರೂ ಮರ ತೆರವು ಬಾಕಿ: ಶಿವಪುರದಲ್ಲಿ 1.08 ಕಿ.ಮೀ. NH 169A ಚತುಷ್ಪಥ ಕಾಮಗಾರಿ ಸ್ಥಗಿತ 

ಪ್ರಕಾಶ್ ಸಾಮಗ 

ಕೋಸ್ಟಲ್ ಟಾಕ್ ನ್ಯೂಸ್ | ಹೆಬ್ರಿ 

ಹೆಬ್ರಿಯ ಶಿವಪುರ ಸಮೀಪದ 1.08 ಕಿ.ಮೀ. ಅರಣ್ಯ ಪ್ರದೇಶದಲ್ಲಿ ಮರ ತೆರವು ಕಾರ್ಯ ಇನ್ನೂ ಆರಂಭವಾಗದಿರುವುದು NH 169A ಚತುಷ್ಪಥ ಕಾಮಗಾರಿಗೆ ಅಡ್ಡಿಯಾಗಿದೆ. ಮಲ್ಪೆ–ಹೆಬ್ರಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದರೂ, ಶಿವಪುರದ ಈ ಭಾಗ ಮಾತ್ರ ಇನ್ನೂ ಏಕಪಥ ರಸ್ತೆಯಾಗಿಯೇ ಉಳಿದಿದೆ. ಮರ ತೆರವು ವೆಚ್ಚಕ್ಕಾಗಿ ರಾಜ್ಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗವು ಈಗಾಗಲೇ ಅರಣ್ಯ ಇಲಾಖೆಗೆ ರೂ. 21 ಲಕ್ಷ ಪಾವತಿಸಿದ್ದರೂ ಕಾಮಗಾರಿ ಆರಂಭವಾಗಿಲ್ಲ. 

ಶಿವಪುರದ ಈ ಭಾಗದಲ್ಲಿ ಮರಗಳನ್ನು ತೆರವುಗೊಳಿಸಿ ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿ ಬಾಕಿಯಿದೆ. ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಮರ ತೆರವು ಕಾರ್ಯ ಕೈಗೊಂಡು, ತೆರವುಗೊಳಿಸಿದ ಪ್ರದೇಶವನ್ನು ರಾಜ್ಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ ವಿಭಾಗವು ಅಗತ್ಯ ಅರಣ್ಯ ಅನುಮತಿ (Forest Clearance–FC) ಪಡೆದುಕೊಂಡಿದ್ದು, ಕಾಮಗಾರಿ ಆರಂಭಿಸಲು ಸಿದ್ಧವಾಗಿದೆ. ಆದರೆ ರಸ್ತೆಯ ವ್ಯಾಪ್ತಿಯಲ್ಲಿರುವ ಮರಗಳನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ನಿಯಮಾನುಸಾರ ಅರಣ್ಯ ಇಲಾಖೆಯೇ ಮರಗಳನ್ನು ಕಡಿದು, ಅವುಗಳನ್ನು ತನ್ನ ಡಿಪೋಗೆ ಸಾಗಿಸಿ ಬಳಿಕ ಹರಾಜು ಮಾಡಬೇಕಿದೆ. ಅಗತ್ಯ ಮೊತ್ತವನ್ನು ಈಗಾಗಲೇ ಪಾವತಿಸಿದ್ದರೂ ಹೆಬ್ರಿ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯಲ್ಲಿ ಮರ ತೆರವು ಕಾರ್ಯ ಇನ್ನೂ ಬಾಕಿಯಿದೆ ಎಂದು ಮೂಲಗಳು ಕೋಸ್ಟಲ್ ಟಾಕ್ ನ್ಯೂಸ್‌ಗೆ ತಿಳಿಸಿವೆ. 

ಮಲ್ಪೆ–ಹೆಬ್ರಿ ಚತುಷ್ಪಥ ಕಾಮಗಾರಿಯನ್ನು ಡಿಸೆಂಬರ್ 2026ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಶಿವಪುರದಲ್ಲಿ ಮರ ತೆರವು ವಿಳಂಬವಾದರೆ ಒಟ್ಟಾರೆ ಯೋಜನೆಯ ಪ್ರಗತಿಗೂ ತೊಂದರೆಯಾಗುವ ಆತಂಕ ವ್ಯಕ್ತವಾಗಿದೆ. ಇದೇ ವೇಳೆ ಪರ್ಕಳ ಮತ್ತು ಪೆರ್ಡೂರು ಭಾಗಗಳೂ NH 169A ಚತುಷ್ಪಥ ಕಾಮಗಾರಿಯ ಪ್ರಮುಖ ತೊಡಕುಗಳಾಗಿ ಉಳಿದಿವೆ.