ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಮದುವೆ ಪ್ರಸ್ತಾಪದ ಬಳಿಕ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ ₹42.97 ಲಕ್ಷ ಹಣ ಪಡೆದ ಆರೋಪದಡಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ನಾಗರತ್ನ ಹೆಚ್. (42) ಮತ್ತು ಹೇಮಂತ್ (41) ಬಂಧಿತರು. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳಿದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ. ಉಡುಪಿಯ ನಿರ್ಮಾಣ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ್ ಕೆ. ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. 

ಪ್ರದೀಪ್ ಅವರು ಮದುವೆಗೆ ವಧುವನ್ನು ಹುಡುಕುತ್ತಿದ್ದಾಗ, 2023ರ ಕೊನೆಯಲ್ಲಿ 2024ರ ಜನವರಿಯಲ್ಲಿ ‘ಕನ್ನಡ ಜೋಡಿ’ ಮ್ಯಾಟ್ರಿಮೋನಿ ಆ್ಯಪ್ ಮೂಲಕ ನಾಗರತ್ನ ಪರಿಚಯವಾಗಿದ್ದರು. ಅವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು. ನಾಗರತ್ನ ಅವರ ಮದುವೆ ಪ್ರಸ್ತಾಪವನ್ನು ಪ್ರದೀಪ್ ನಿರಾಕರಿಸಿದ್ದರು. ಬಳಿಕವೂ ಅವರು ಕರೆ ಮತ್ತು ಸಂದೇಶಗಳ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಜನವರಿ 2024ರಿಂದ ಜನವರಿ 2026ರ ನಡುವೆ ನಾಗರತ್ನ ಹಾಗೂ ಇತರ ಮೂವರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹42,97,350 ವರ್ಗಾಯಿಸುವಂತೆ ಬೆದರಿಕೆ ಹಾಕಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಣ ವಾಪಸ್ ಕೇಳಿದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ, ಕಚೇರಿಗೆ ಬಂದು ಮಾನಹಾನಿ ಮಾಡುವುದಾಗಿ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಕ್ಟೋಬರ್ 26ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಬಸವೇಶ್ವರ ನಗರದಲ್ಲಿ ನಾಗರತ್ನ ಹಾಗೂ ಹೇಮಂತ್ ಅವರನ್ನು ವಶಕ್ಕೆ ಪಡೆದು ಬಂಧಿಸಿದರು. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.