ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು

ಮಂಗಳೂರಿನ ವೇಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ನ ಪಾದ್ರಿ ಸಿಪ್ರಿಯನ್ ಪಿಂಟೋ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಅಕ್ಟೋಬರ್ 15ರಂದು ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಪ್ರಾರ್ಥನೆಗಾಗಿ ಚರ್ಚ್‌ಗೆ ಬರುತ್ತಿದ್ದ ಬಾಲಕನನ್ನು ಪಾದ್ರಿ ಸಕ್ರಿಸ್ಟಿ ಕೊಠಡಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಗಸ್ಟ್ 14ರಂದು ಬಾಲಕನ ಮೇಲೆ ಮತ್ತೆ ದೌರ್ಜನ್ಯ ಎಸಗಲಾಗಿದೆ ಎನ್ನಲಾಗಿದೆ.

ಬಾಲಕ ತನ್ನ ಸ್ನೇಹಿತರ ಬಳಿ ಈ ವಿಷಯ ಹಂಚಿಕೊಂಡಾಗ, ಅವರೂ ಇದೇ ಪಾದ್ರಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಈ ವಿಚಾರ ಮಂಗಳೂರು ಬಿಷಪ್ ಅವರ ಗಮನಕ್ಕೆ ತರಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

ಸಂತ್ರಸ್ತ ಬಾಲಕ ಆರಂಭದಲ್ಲಿ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದರೂ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು, ಈ ಹಂತದಲ್ಲಿ ಹೆಚ್ಚಿನ ವಿವರ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಬಹಿರಂಗಪಡಿಸಿದರೆ ಆರೋಪಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ನೆರವಾಗಬಹುದು ಎಂದು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.