ದಕ್ಷಿಣ ಹಿಂದೂ ಮಹಾಸಾಗರ ಮೀನುಗಾರಿಕೆ ಒಪ್ಪಂದಕ್ಕೆ ಭಾರತದ ಸೇರ್ಪಡೆಗೆ ಕೇಂದ್ರ ಸರ್ಕಾರದ ಅನುಮೋದನೆ

ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ

ದಕ್ಷಿಣ ಹಿಂದೂ ಮಹಾಸಾಗರ ಮೀನುಗಾರಿಕೆ ಒಪ್ಪಂದಕ್ಕೆ (SIOFA) ಭಾರತ ಸೇರ್ಪಡೆಯಾಗಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಜಾಗತಿಕ ಮೀನುಗಾರಿಕೆ ಆಡಳಿತದಲ್ಲಿ ಭಾರತದ ಪಾತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ.

ಈ ಅನುಮೋದನೆಯಿಂದಾಗಿ ಭಾರತೀಯ ಧ್ವಜ ಹೊಂದಿರುವ ಮೀನುಗಾರಿಕಾ ಹಡಗುಗಳು ಮತ್ತು ಉದ್ಯಮಗಳು SIOFA ವ್ಯಾಪ್ತಿಯಲ್ಲಿ ಸ್ಕ್ವಿಡ್, ಟೂತ್‌ಫಿಶ್, ಅಲ್ಫಾನ್ಸಿನೊ ಸೇರಿದಂತೆ ವಲಸೆ ಹೋಗದ ಇತರ ಮೀನು ಪ್ರಭೇದಗಳನ್ನು ನಿಗದಿತ ನಿಯಮಗಳಡಿ ಹಿಡಿಯಲು ಅವಕಾಶ ದೊರೆಯಲಿದೆ.

ಈ ಕ್ರಮದಿಂದ ಭಾರತೀಯ ಮೀನುಗಾರರು ಮತ್ತು ಉದ್ಯಮಿಗಳಿಗೆ ಹೊಸ ಮೀನುಗಾರಿಕೆ ಅವಕಾಶಗಳು ತೆರೆದುಕೊಳ್ಳಲಿವೆ. ಅಲ್ಲದೆ, SIOFA ವ್ಯಾಪ್ತಿಯಲ್ಲಿ ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಅನುಸರಿಸುವ ಮೂಲಕ ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ, ಅವುಗಳ ದೀರ್ಘಕಾಲೀನ ಲಭ್ಯತೆ ಹಾಗೂ ಮೀನುಗಾರ ಸಮುದಾಯಗಳ ಜೀವನೋಪಾಯಕ್ಕೆ ನೆರವಾಗಲಿದೆ.