ಭಾರತವನ್ನು ಜಾಗತಿಕ ರೇಷ್ಮೆ ಉತ್ಪಾದನೆಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಬದ್ಧ: ಗಿರಿರಾಜ್ ಸಿಂಗ್

 

ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು

 

ಭಾರತವನ್ನು ಜಾಗತಿಕ ರೇಷ್ಮೆ ಉತ್ಪಾದನೆಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ರೇಷ್ಮೆ ಕೃಷಿಕರ ಆರ್ಥಿಕ ಪ್ರಗತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಹೇಳಿದರು.

 

ಬೆಂಗಳೂರಿನ ಯುಎಎಸ್-ಜಿಕೆವಿಕೆ ಸಭಾಂಗಣದಲ್ಲಿ ಭಾನುವಾರ ನಡೆದ ಕೇಂದ್ರ ರೇಷ್ಮೆ ಮಂಡಳಿಯ 77ನೇ ಸಂಸ್ಥಾಪನಾ ದಿನಾಚರಣೆ ಹಾಗೂ ರೇಷ್ಮೆ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನವನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಾಗೂ ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು.

 

ಕಾರ್ಯಕ್ರಮದಲ್ಲಿ ಮಾತನಾಡಿದ ಗಿರಿರಾಜ್ ಸಿಂಗ್, 2014ರಲ್ಲಿ ದೇಶದ ರೇಷ್ಮೆ ಉತ್ಪಾದನೆ 26,000 ಮೆಟ್ರಿಕ್ ಟನ್‌ಗಳಷ್ಟಿದ್ದು, ಪ್ರಸ್ತುತ ಅದು 42,000 ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ ಎಂದರು. 2030-31ರ ವೇಳೆಗೆ ಉತ್ಪಾದನೆಯನ್ನು 60,000 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದ್ದು, 2028-29ರ ವೇಳೆಗೆ ಜಾಗತಿಕ ರೇಷ್ಮೆ ಉತ್ಪಾದನೆಯಲ್ಲಿ ಭಾರತವನ್ನು ಅಗ್ರಸ್ಥಾನಕ್ಕೆ ತರುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

 

ಹಿಪ್ಪುನೇರಳೆ ಎಲೆಗಳ ಉತ್ಪಾದಕತೆ ಹೆಚ್ಚಿಸುವುದು ಹಾಗೂ ರೇಷ್ಮೆ ಹುಳು ಸಾಕಾಣಿಕೆಯನ್ನು ಹೆಚ್ಚಿಸುವ ಮೂಲಕ ವಾರ್ಷಿಕವಾಗಿ ರೈತರ ಆದಾಯವನ್ನು ₹10 ಲಕ್ಷದಿಂದ ₹12 ಲಕ್ಷದವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

 

ರೇಷ್ಮೆ ಕೃಷಿಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ‘ಅತ್ಯುತ್ತಮ ರೇಷ್ಮೆ ಕೃಷಿಕ’ ಪ್ರಶಸ್ತಿ ಸ್ಪರ್ಧೆಗಳನ್ನು ಆಯೋಜಿಸುವಂತೆ ಅವರು ಕರೆ ನೀಡಿದರು.

 

ವಿಜ್ಞಾನಿಗಳ ಹೊಸ ಆವಿಷ್ಕಾರಗಳು, ಹೈಬ್ರಿಡ್ ತಳಿಗಳು ಹಾಗೂ ಆಧುನಿಕ ಯಂತ್ರೋಪಕರಣಗಳ ಪ್ರಯೋಜನ ನೇರವಾಗಿ ರೈತರಿಗೆ ತಲುಪಬೇಕು ಎಂದು ಅವರು ಹೇಳಿದರು. ಚೀನಾದ ರೇಷ್ಮೆ ಉತ್ಪಾದನೆ ಕುಸಿಯುತ್ತಿರುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೇಷ್ಮೆಗೆ ಬೇಡಿಕೆ ಹೆಚ್ಚುತ್ತಿದೆ ಎಂದು ತಿಳಿಸಿದರು. ರೇಷ್ಮೆ ಕೃಷಿಯಿಂದ ಹಿಡಿದು ರೀಲಿಂಗ್ ಮತ್ತು ನೇಯ್ಗೆಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸುವುದು, ದೇಶದ ಜವಳಿ ಮಾರುಕಟ್ಟೆಯನ್ನು 300 ಬಿಲಿಯನ್ ಡಾಲರ್‌ಗೆ ವಿಸ್ತರಿಸುವುದು ಹಾಗೂ ನೇಕಾರರು ಮತ್ತು ಕಾರ್ಮಿಕ ವರ್ಗಕ್ಕೆ ಕನಿಷ್ಠ ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಗಿರಿರಾಜ್ ಸಿಂಗ್ ಹೇಳಿದರು.

 

ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ವಿಶೇಷ ಗಮನ ನೀಡುತ್ತಿದೆ ಎಂದರು. ಸ್ಥಳೀಯ ರೇಷ್ಮೆ ಉತ್ಪಾದಕರಿಗೆ ಸೂಕ್ತ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಹಾಗೂ ರೇಷ್ಮೆ ಕೃಷಿ ಮತ್ತು ಜವಳಿ ಕೈಗಾರಿಕಾ ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.