ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ
ಭಯೋತ್ಪಾದನೆಯು ಶಾಂತಿ ಮತ್ತು ಅಭಿವೃದ್ಧಿಗೆ ಎದುರಾಗಿರುವ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದ್ದು, ಅದರ ಸಂಪೂರ್ಣ ಜಾಲವನ್ನು ಕಿತ್ತೊಗೆಯಲು ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸದಸ್ಯ ರಾಷ್ಟ್ರಗಳು ಸಂಘಟಿತ ಪ್ರಯತ್ನಗಳನ್ನು ನಡೆಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಮಂಗಳವಾರ ತಜಿಕಿಸ್ತಾನದ ದುಶಾಂಬೆಯಲ್ಲಿ ನಡೆದ ಎಸ್ಸಿಒ ಸದಸ್ಯ ರಾಷ್ಟ್ರಗಳ ಸರ್ಕಾರದ ಮುಖ್ಯಸ್ಥರ ಮಂಡಳಿಯ 25ನೇ ಸಭೆಯಲ್ಲಿ ಅವರು ಮಾತನಾಡಿದರು.
“ಭಯೋತ್ಪಾದನೆಯಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಾರೆ ಮತ್ತು ಹೂಡಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. ಇದು ಸಮಾಜದಲ್ಲಿ ತೀವ್ರವಾದಿ ಮನೋಭಾವವನ್ನು ಬೆಳೆಸುವುದರ ಜೊತೆಗೆ, ಯುವಜನರು ಪಡೆಯಬೇಕಾದ ಅವಕಾಶಗಳಿಂದ ಅವರನ್ನು ವಂಚಿತಗೊಳಿಸುತ್ತದೆ. ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇಲ್ಲ. ಅದನ್ನು ಎದುರಿಸುವ ವಿಚಾರದಲ್ಲಿ ದ್ವಂದ್ವ ನೀತಿಗೆ ಅವಕಾಶವಿಲ್ಲ. ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವವರು, ಬೆಂಬಲಿಸುವವರು ಅಥವಾ ಆಶ್ರಯ ನೀಡುವವರಿಗೆ ಯಾವುದೇ ಸ್ಥಾನವಿರಬಾರದು,” ಎಂದು ರಾಜನಾಥ್ ಸಿಂಗ್ ಹೇಳಿದರು.
2026ರ ಆಗಸ್ಟ್-ಸೆಪ್ಟೆಂಬರ್ನಲ್ಲಿ ಬಿಷ್ಕೆಕ್ನಲ್ಲಿ ನಡೆದ ಎಸ್ಸಿಒ ಶೃಂಗಸಭೆಯ ಚರ್ಚೆಗಳನ್ನು ಸ್ಮರಿಸಿದ ರಾಜನಾಥ್ ಸಿಂಗ್, ಭದ್ರತೆ, ಸಂಪರ್ಕ ವ್ಯವಸ್ಥೆ ಮತ್ತು ಅವಕಾಶಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಂಘಟನೆಯು ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಉಲ್ಲೇಖಿಸಿದರು. ಆರ್ಥಿಕ ಸಹಕಾರವು ಎಲ್ಲ ಸದಸ್ಯ ರಾಷ್ಟ್ರಗಳನ್ನೂ ಒಳಗೊಳ್ಳುವಂತಿರಬೇಕು ಮತ್ತು ಪರಸ್ಪರ ಪ್ರಯೋಜನಕಾರಿಯಾಗಿರಬೇಕು ಎಂಬುದು ಭಾರತದ ನಿಲುವಾಗಿದೆ ಎಂದು ಅವರು ತಿಳಿಸಿದರು.
“ಎಸ್ಸಿಒ ಸಾರ್ವಭೌಮ ಸಮಾನತೆ, ಒಮ್ಮತ ಮತ್ತು ಪರಸ್ಪರ ಗೌರವದ ತತ್ವಗಳಿಗೆ ಬದ್ಧವಾಗಿದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂಬುದು ಭಾರತದ ನಂಬಿಕೆ. ಸಂಸ್ಥೆಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಸಾಧನೆಗಳೂ ಹೆಚ್ಚಾಗುತ್ತವೆ ಎಂದರ್ಥವಲ್ಲ. ಹೊಸ ಕಾರ್ಯವಿಧಾನಗಳು ಸ್ಪಷ್ಟವಾಗಿ ಗುರುತಿಸಲಾದ ಅಗತ್ಯಗಳನ್ನು ಆಧರಿಸಿರಬೇಕು, ಈಗಾಗಲೇ ಇರುವ ವ್ಯವಸ್ಥೆಗಳ ಪುನರಾವರ್ತನೆಯನ್ನು ತಪ್ಪಿಸಬೇಕು ಮತ್ತು ಸದಸ್ಯ ರಾಷ್ಟ್ರಗಳಿಗೆ ಪ್ರಾಯೋಗಿಕವಾಗಿ ಪ್ರಯೋಜನವಾಗುವ ಫಲಿತಾಂಶಗಳಿಗೆ ಆದ್ಯತೆ ನೀಡಬೇಕು,” ಎಂದು ಅವರು ಹೇಳಿದರು.