ಬೆಂಗಳೂರಿನಲ್ಲಿ ಹಸಿರು ಉದ್ಯಾನವನ: ರಕ್ಷಣಾ ಸಚಿವರ ಭರವಸೆ

 ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ 

"ಮೇಕೆದಾಟು ಯೋಜನೆಯಿಂದ ನಾವು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳಬಹುದು, ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶ ಕೇಂದ್ರ ಸಚಿವರಿಗೆ ಮನದಟ್ಟಾಗಿದೆ. ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ ಯೋಜನೆ ಜಾಗ ಪರಿಶೀಲನೆ ಮಾಡಲಿ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ಬಳಿಕ ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. 

ಮೇಕೆದಾಟು ಅಣೆಕಟ್ಟಿಗೆ ಮತ್ತೊಮ್ಮೆ ಡಿಪಿಆರ್ ಸಲ್ಲಿಕೆಯಾಗಿರುವ ಬಗ್ಗೆ ಎಂದು ಕೇಳಿದಾಗ, "ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಸ್ಥಳ ಗುರುತಿಸಲಾಗಿದೆ. ಈಗ 5 ಸಾವಿರ ಕ್ಯೂಸೆಕ್ ನೀರಿಗೆ ಬಡಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಕೆ.ಆರ್.ಎಸ್ ತುಂಬಿಲ್ಲದ ಕಾರಣ ಕಬಿನಿ ಭಾಗದ ರೈತರು ಗಲಾಟೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ತಂಡ ಸ್ಥಳಕ್ಕೆ ಭೇಟಿ ನೀಡಿದೆ" ಎಂದು ಮಾಹಿತಿ ನೀಡಿದರು. 

"ತಮಿಳುನಾಡು ತಂಡ ಭೇಟಿ ನೀಡಿದರೂ ಅವರಿಗೂ ಸಹಕಾರ ನೀಡಲಾಗುವುದು. ನೀರನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳಿಗೆ ಸಹ  ಮನದಟ್ಟಾಗಿದೆ. ತಮಿಳುನಾಡು ಮುಖ್ಯಮಂತ್ರಿಯವರಿಗೆ ಮೇಕೆದಾಟು ಯೋಜನೆಯ ಸಭೆಯಲ್ಲಿ ಪಾಲ್ಗೊಳ್ಳಲು ಭೇಟಿ ನೀಡಲು ಮನವಿ ಮಾಡಿಕೊಳ್ಳಲಾಗುವುದು" ಎಂದರು. 

ಜಲಶಕ್ತಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ 

"ರಾಜ್ಯದ ಕೃಷ್ಣಾ, ಮೇಕೆದಾಟು ಸೇರಿದಂತೆ ಇತರೆ ಜಲವಿವಾದಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಅವರೊಂದಿಗೆ ಚರ್ಚಿಸಿ  ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಿ ಸಹಕರಿಸಲು ಮನವಿ ಮಾಡಲಾಗಿದ್ದು, ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ರಾಜ್ಯದ ಯೋಜನೆಗಳಿಗೆ ಬರಬೇಕಾದ ಅನುದಾನಗಳ ಬಗ್ಗೆ ಮನವಿ ಮಾಡಲಾಗಿದೆ" ಎಂದು ತಿಳಿಸಿದರು. 

ಮಹದಾಯಿ ಯೋಜನೆ: ಜಂಟಿ ಸಭೆ ನಡೆಸಲು ಕೇಂದ್ರದ ಭರವಸೆ 

"ಮಹದಾಯಿ ಮತ್ತು ಅರಣ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಭೆಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಅಕ್ಕ ಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು  ಸಮಸ್ಯೆ  ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ" ಎಂದು ಮಾಹಿತಿ ನೀಡಿದರು. 

ಬೆಂಗಳೂರಿನಲ್ಲಿ ಹಸಿರು ಉದ್ಯಾನವನ: ರಕ್ಷಣಾ ಸಚಿವರ ಭರವಸೆ 

"ಬೆಂಗಳೂರಿನ ಇಬ್ಬಲೂರಲ್ಲಿ 700ಎಕರೆ ರಕ್ಷಣಾ ಇಲಾಖೆಯ ಭೂಮಿ ಖಾಲಿ ಇದೆ. ಹಸಿರು ಉದ್ಯಾನವನ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಇದಕ್ಕೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ" ಎಂದು ಹೇಳಿದರು. "ಇದರ ಜೊತೆಗೆ ಉದ್ಯಾನವನ, ಮೇಕ್ರಿ ಸರ್ಕಲ್ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ಇಲಾಖೆ ಜಮೀನು ಹಸ್ತಾಂತರಕ್ಕೆ ಮನವಿ ಮಾಡಲಾಗಿದೆ. ಬೆಂಗಳೂರಿನ ರಕ್ಷಣಾ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಅವಳಿ ಸುರಂಗ ಯೋಜನೆ, ಅಗರ- ಸರ್ಜಾಪುರ ರಸ್ತೆ ವಿಸ್ತರಣೆ, ಏರ್ಪೋರ್ಟ್ ರಸ್ತೆಯಿಂದ (ಬಳ್ಳಾರಿ ರಸ್ತೆ) ಸರೋವರ ಲೇಔಟ್ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ನೆರವು, ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣಕ್ಕೆ ರಕ್ಷಣಾ ಇಲಾಖೆ ಜಮೀನು ಹಸ್ತಾಂತರದ ಬಗ್ಗೆ ಮನವಿ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.