ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಪೊಲೀಸ್ ಹುತಾತ್ಮರ ದಿನಾಚರಣೆ ಕೇವಲ ಸ್ಮರಣೆಯ ದಿನ ಮಾತ್ರವಲ್ಲದೇ, ಅಪಾಯ ಮತ್ತು ಜನರ ಸುರಕ್ಷತೆಯ ನಡುವೆ ನಿಂತು ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಯ ಧೈರ್ಯ, ಸಮರ್ಪಣೆ ಹಾಗೂ ತ್ಯಾಗವನ್ನು ಗುರುತಿಸುವ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು. ಅವರು ಬುಧವಾರ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜನರು ಮನೆಯಲ್ಲಿ ನೆಮ್ಮದಿಯಿಂದ ನಿದ್ರಿಸುವಾಗ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ. ಹಬ್ಬ-ಹರಿದಿನಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಭದ್ರತೆ ಒದಗಿಸುವುದರ ಜತೆಗೆ, ಅಪಘಾತ, ಪ್ರಕೃತಿ ವಿಕೋಪ ಹಾಗೂ ಕೋಮು ಉದ್ವಿಗ್ನತೆಯಂತಹ ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಡುತ್ತಾರೆ. ಇಂತಹ ಪೊಲೀಸ್ ಸಿಬ್ಬಂದಿಯ ಸೇವೆ, ಧೈರ್ಯ ಮತ್ತು ಕರ್ತವ್ಯನಿಷ್ಠೆಯನ್ನು ಸಮಾಜ ಸದಾ ಗೌರವಿಸಬೇಕು ಎಂದರು.
ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಸಮವಸ್ತ್ರದ ಹಿಂದೆ ಒಂದು ಕುಟುಂಬವಿರುತ್ತದೆ. ಕರ್ತವ್ಯದ ವೇಳೆ ಪೊಲೀಸ್ ಅಧಿಕಾರಿ ಮೃತಪಟ್ಟಾಗ ದೇಶವೊಂದು ರಕ್ಷಕನನ್ನು ಕಳೆದುಕೊಂಡರೆ, ಅವರ ಕುಟುಂಬವು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಹುತಾತ್ಮರಿಗೆ ಸಲ್ಲಿಸುವ ಗೌರವವು ಪುಷ್ಪನಮನ ಮತ್ತು ಗೌರವ ವಂದನೆಗೆ ಮಾತ್ರ ಸೀಮಿತವಾಗಬಾರದು. ಅವರ ಕುಟುಂಬಗಳನ್ನು ನೆನಪಿಸಿಕೊಂಡು, ಅಗತ್ಯ ಬೆಂಬಲ ನೀಡಬೇಕು. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ವಿವಿಧ ಕಾರ್ಯಾಚರಣೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಹೆಸರುಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ಸಿಬ್ಬಂದಿಯ ಗೌರವಾರ್ಥ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು.