ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಕ್ಟೋಬರ್ 21ರಂದು ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಕೇಂದ್ರ ಪೊಲೀಸ್ ಸಂಘಟನೆಗಳ ಸುಮಾರು 90 ಮಂದಿ ಪೊಲೀಸ್ ಸವಾರರು ಭಾಗವಹಿಸುವ ಬೈಕ್ ರ್ಯಾಲಿಗೆ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ‘ಮಾದಕ ದ್ರವ್ಯಗಳ ವಿರುದ್ಧ ಹೋರಾಟ’ ಎಂಬ ಸಂದೇಶದೊಂದಿಗೆ ದೇಶಾದ್ಯಂತ ನಡೆಯುತ್ತಿರುವ ಈ ರ್ಯಾಲಿಯಲ್ಲಿ ಭಾಗವಹಿಸುವ ಪೊಲೀಸ್ ಸವಾರರು ಅಕ್ಟೋಬರ್ 31ರಂದು ಗುಜರಾತ್ನ ಏಕತಾ ನಗರದಲ್ಲಿ ನಡೆಯುವ ಏಕತಾ ಪರೇಡ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
1959ರ ಅಕ್ಟೋಬರ್ 21ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರೀ ಶಸ್ತ್ರಸಜ್ಜಿತ ಚೀನಿ ಸೈನಿಕರು ನಡೆಸಿದ ಹೊಂಚುದಾಳಿಯಲ್ಲಿ 10 ಮಂದಿ ಪೊಲೀಸರು ಹುತಾತ್ಮರಾಗಿದ್ದರು. ಅವರ ತ್ಯಾಗದ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ 21ರಂದು ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತದೆ.
ಪೊಲೀಸರ ತ್ಯಾಗ ಮತ್ತು ದೇಶದ ಭದ್ರತೆ ಹಾಗೂ ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪಾತ್ರವನ್ನು ಗೌರವಿಸುವ ಉದ್ದೇಶದಿಂದ, ಪ್ರಧಾನಮಂತ್ರಿ ಅವರು 2018ರ ಪೊಲೀಸ್ ಸಂಸ್ಮರಣಾ ದಿನದಂದು ನವದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು.
ಸ್ಮಾರಕದ ವಿಶೇಷತೆ
ರಾಷ್ಟ್ರೀಯ ಪೊಲೀಸ್ ಸ್ಮಾರಕವು ಕೇಂದ್ರ ಶಿಲ್ಪ, ‘ವೀರರ ಗೋಡೆ’ ಮತ್ತು ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. 30 ಅಡಿ ಎತ್ತರದ ಗ್ರಾನೈಟ್ ಏಕಶಿಲಾ ಸ್ಮಾರಕವು ಪೊಲೀಸರ ಶಕ್ತಿ, ಸ್ಥೈರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತದೆ.
ಸ್ವಾತಂತ್ರ್ಯಾನಂತರ ಕರ್ತವ್ಯ ನಿರ್ವಹಿಸುವಾಗ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ‘ವೀರರ ಗೋಡೆ’ಯಲ್ಲಿ ಕೆತ್ತಲಾಗಿದೆ. ಇದು ಅವರ ಧೈರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ. ಭಾರತದ ಪೊಲೀಸ್ ವ್ಯವಸ್ಥೆಯ ಇತಿಹಾಸ ಹಾಗೂ ಅದರ ಬೆಳವಣಿಗೆಯನ್ನು ಪರಿಚಯಿಸುವ ಉದ್ದೇಶದಿಂದ ವಸ್ತುಸಂಗ್ರಹಾಲಯವನ್ನು ರೂಪಿಸಲಾಗಿದೆ.
ರಾಷ್ಟ್ರೀಯ ಪೊಲೀಸ್ ಸ್ಮಾರಕವು ಪೊಲೀಸ್ ಪಡೆಗಳಲ್ಲಿ ರಾಷ್ಟ್ರೀಯ ಗುರುತಿನ ಭಾವನೆ, ಹೆಮ್ಮೆ, ಏಕತೆ ಮತ್ತು ಸಾಮೂಹಿಕ ಕರ್ತವ್ಯಪ್ರಜ್ಞೆಯನ್ನು ಬಲಪಡಿಸುವುದರ ಜತೆಗೆ, ದೇಶದ ರಕ್ಷಣೆಗಾಗಿ ಪ್ರಾಣವನ್ನೂ ಲೆಕ್ಕಿಸದೆ ಸೇವೆ ಸಲ್ಲಿಸುವ ಸಂಕಲ್ಪವನ್ನು ನೆನಪಿಸುತ್ತದೆ.