ಡಂಪಿಂಗ್ ಯಾರ್ಡ್ ಮತ್ತು ಫ್ಲೈಓವರ್ ಕೆಳಗಿನ ಸ್ಥಿತಿ ಕಂಡು ಗರಂ ಆದ ಉಪ ಲೋಕಯುಕ್ತ

ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ

ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾ.ಕೆ.ಎನ್ ಫಣೀಂದ್ರ ಅವರು ಬುಧವಾರ ಬೆಳಗ್ಗೆ ಕಾರವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಶಿರವಾಡದಲ್ಲಿನ ನಗರಸಭೆಯ ಡಂಪಿಂಗ್ ಯಾರ್ಡ್ ಮತ್ತು ನಗರದ ಹೆದ್ದಾರಿ ಫ್ಲೈಓವರ್ ಕೆಳಗಿನ ಜಾಗದಲ್ಲಿನ ಸ್ಥಿತಿ ಕಂಡು ಸಂಬoಧಪಟ್ಟ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಡಂಪಿಂಗ್ ಯಾರ್ಡ್ ಘಟಕದ ಸುತ್ತಮುತ್ತಲಿನ ಅವೈಜ್ಞಾನಿಕ ಹಾಗೂ ಅಸ್ವಚ್ಛ ವಾತಾವರಣವನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದರಲ್ಲಿ ಕರ್ತವ್ಯ ಲೋಪವೆಸಗಿದ ಸಂಬoಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದನ್ನು ಹಾಗೂ ಸ್ಥಳೀಯ ಪರಿಸರ ಹಾಳಾಗುತ್ತಿರುವುದು ಮತ್ತು ತ್ಯಾಜ್ಯ ಘಟಕದಲ್ಲಿ ಒಣ ಹಾಗೂ ಹಸಿ ಕಸದ ವಿಲೇವಾರಿ ಅತ್ಯಂತ ವಿಳಂಬವಾಗಿ ನಡೆಯುತ್ತಿದ್ದು, ಸುತ್ತಮುತ್ತಲಿನ ಚರಂಡಿಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲದಿರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟಕದಿಂದ ಹೊರಬರುವ ಕಲುಷಿತ ದ್ರವ ತ್ಯಾಜ್ಯವು ನೇರವಾಗಿ ಭೂಮಿಗೆ ಇಂಗುತ್ತಿದ್ದು, ಇದರಿಂಧ ಸುತ್ತಮುತ್ತಲಿನ ಬಾವಿ ಹಾಗೂ ಕುಡಿಯುವ ನೀರಿನ ಮೂಲಗಳು ಕಲುಷಿತಗೊಂಡಿರುವ ಬಗ್ಗೆ ಮತ್ತು ಸೊಳ್ಳೆ, ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿರುವ ಆತಂಕದ ಬಗ್ಗೆ ಸ್ಥಳೀಯರು ಉಪ ಲೋಕಾಯುಕ್ತರ ಗಮನಕ್ಕೆ ತಂದರು.

ಈ ಗಂಭೀರ ಸಮಸ್ಯೆಯ ಕುರಿತು ಸ್ವಯಂಪ್ರೇರಿತವಾಗಿ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ ಉಪಲೋಕಾಯುಕ್ತರು, ಘಟಕದ ವೈಜ್ಞಾನಿಕ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲು ತಕ್ಷಣವೇ ನಿರ್ದೇಶನ ನೀಡಿದರು. ಈ ಸಮಿತಿಯಲ್ಲಿ ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆ , ಜಿ.ಪಂ. ಸಿಇಒ ಹಾಗೂ ವೈದ್ಯಾಧಿಕಾರಿಗಳನ್ನು ಸೇರ್ಪಡೆಗೊಳಿಸಿ ಸಮಗ್ರ ಸರ್ವೇ ನಡೆಸೆ, ವರದಿ ನೀಡಲು ಸೂಚಿಸಿದ ಅವರು ಸಾರ್ವಜನಿಕರಿಗೆ ತೊಂದರೆಯಾಗದAತೆ ಅಗತ್ಯವಿದ್ದರೆ ಈ ತ್ಯಾಜ್ಯ ಘಟಕವನ್ನು ಜನವಸತಿಯಿಲ್ಲದ ಜಾಗಕ್ಕೆ ಅಥವಾ ಸೂಕ್ತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ನಗರದ ಹೆದ್ದಾರಿ ಫ್ಲೈ ಓವರ್ ಕೆಳಗಿನ ಖಾಲಿ ಜಾಗದಲ್ಲಿ ಅನಧಿಕೃತವಾಗಿ ವಾಹನಗಳ ಪಾರ್ಕಿಂಗ್ ಮತ್ತಿತರ ಚಟುವಟಿಕೆ ನಡೆಯಲು ಅವಕಾಶ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಅನಧಿಕೃತ ಕೃತ್ಯಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ಬೇಜಾವಾಬ್ದಾರಿ ನಡವಳಿಕೆಯನ್ನು ಕುರಿತು ತಕ್ಷಣವೇ ಲಿಖಿತ ಸ್ಪಷ್ಟನೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ, ಈ ನಿರ್ಲಕ್ಷ್ಯದ ಬಗ್ಗೆ ಪ್ರಕರಣದ ಕುರಿತು ಪ್ರಕರಣ ದಾಖಲಿಸುವಂತೆ ತಿಳಿಸಿದ ಅವರು ಈ ಬಗ್ಗೆ ಸಮಗ್ರ ವರದಿಯನ್ನು ಪಡೆದು, ಕೇಂದ್ರದ ಲೋಕಪಾಲ್ ಗಮನಕ್ಕೆ ತರುವುದಾಗಿ ತಿಳಿಸಿದರು.

ಪರಿಶೀಲನೆ ವೇಳೆ ಫ್ಲೈಓವರ್ ಕೆಳಗೆ ನರ್ಸರಿ ಗಿಡಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ವಿಚಾರಣೆ ನಡೆಸಿ ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೆ ಖಾಲಿ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮುಂದುವರಿಸಲಾಗುತ್ತಿದ್ದರೂ, ಅಧಿಕಾರಿಗಳು ಕೇವಲ ನೋಟಿಸ್ ನೀಡುವುದು ಮತ್ತು ದಂಡ ಹಾಕಿ ಸುಮ್ಮನಾಗುವುದರಿಂದ ಇಂತಹ ಅಕ್ರಮಗಳು ನಿಲ್ಲುವುದಿಲ್ಲ, ಬದಲಿಗೆ ಕ್ರಿಮಿನಲ್ ದೂರು ದಾಖಲಿಸಿ ವಸ್ತುಗಳು ಹಾಗೂ ವಾಹನಗಳನ್ನು ಜಪ್ತಿ ಮಾಡುವಂತಹ ಕಠಿಣ ಕ್ರಮ ಕೈಗೊಳ್ಳಬೇಕು. ಫ್ಲೈಓವರ್ ಕೆಳಗೆ ವಾಹನಗಳ ನಿಲ್ಲದಂತೆ ಸುತ್ತಲೂ ಗೇಟ್‌ಗಳನ್ನು ಅಳವಡಿಸುವಂತೆ ಮತ್ತು ತೋಟಗಾರಿಕಾ ಇಲಾಖೆ ಮೂಲಕ ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಮಾಡುವಂತೆ ಸೂಚಿಸಿದರು.