ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು
ಕರ್ನಾಟಕದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 2027ರಲ್ಲಿ ಪಾಲುದಾರ ರಾಷ್ಟ್ರವಾಗಿ ಭಾಗವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪೋಲೆಂಡ್ಗೆ ಆಹ್ವಾನ ನೀಡಿದ್ದಾರೆ. ಇದೇ ವೇಳೆ, ಪೋಲೆಂಡ್ನ ಟಿಜಡ್ಎಂಒ (TZMO) ಗ್ರೂಪ್ ಕರ್ನಾಟಕದಲ್ಲಿ ಸುಮಾರು 80 ಕೋಟಿ ರೂ. ಹೂಡಿಕೆ ಮಾಡಲು ಉದ್ದೇಶಿಸಿದ್ದು, ಇದರಿಂದ ಸುಮಾರು 1,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಹಾಗೂ ಆ ದೇಶದ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, “ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಜಾಗತಿಕ ಕೇಂದ್ರವಾಗಿರುವ ಕರ್ನಾಟಕದ ಬೆಂಗಳೂರಿಗೆ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಹಾಗೂ ಗಣ್ಯ ಪೋಲಿಷ್ ನಿಯೋಗವನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ” ಎಂದರು.
ಜಾಗತಿಕ ಹೂಡಿಕೆದಾರರ ಸಮಾವೇಶ 2027ರಲ್ಲಿ ಕರ್ನಾಟಕದೊಂದಿಗೆ ಪಾಲುದಾರ ರಾಷ್ಟ್ರವಾಗಿ ಭಾಗವಹಿಸುವಂತೆ ಪೋಲೆಂಡ್ಗೆ ಆಹ್ವಾನಿಸಿದ ಅವರು, ಹೂಡಿಕೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಬೆಂಗಳೂರಿನ ತಂತ್ರಜ್ಞಾನ ವ್ಯವಸ್ಥೆ ಹಾಗೂ ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ ಮತ್ತು ಹಸಿರು ಇಂಧನ ಕ್ಷೇತ್ರಗಳಲ್ಲಿ ಪೋಲೆಂಡ್ ಹೊಂದಿರುವ ಪರಿಣತಿಯನ್ನು ಈ ಸಹಕಾರಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
ಕೋಲಾರ ಜಿಲ್ಲೆಯ ಕೆಐಎಡಿಬಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಐದು ಎಕರೆ ಜಾಗದಲ್ಲಿ ಸುಮಾರು 80 ಕೋಟಿ ರೂ. ಹೂಡಿಕೆ ಮಾಡುವ ಟಿಜಡ್ಎಂಒ ಗ್ರೂಪ್ನ ಪ್ರಸ್ತಾವನೆಯನ್ನು ಅವರು ಸ್ವಾಗತಿಸಿದರು. ಈ ಯೋಜನೆಯಿಂದ ಸುಮಾರು 1,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಭಾರತದಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ವಯಸ್ಕರ ಮೂತ್ರ ಸೋರಿಕೆ ಪ್ಯಾಡ್ಗಳ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ.