ಚಂಡಮಾರುತ ವಿಪತ್ತು ನಿರ್ವಹಣೆಯ ಅಣುಕು ಕಾರ್ಯಾಚರಣೆಯಲ್ಲಿ ಲೋಪಗಳಾಗದಂತೆ ಕಾರ್ಯ ನಿರ್ವಹಿಸಿ: ಜಿಲ್ಲಾಧಿಕಾರಿ
ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಚಂಡಮಾರುತ ಹಾಗೂ ಅದರಿಂದ ಉಂಟಾಗಬಹುದಾದ ವಿಪತ್ತುಗಳ ಕುರಿತು ಅಕ್ಟೋಬರ್ 1 ರಂದು ಜಿಲ್ಲೆಯಲ್ಲಿ ನಡೆಯುವ ಅಂತಾರಾಜ್ಯ ಮಟ್ಟದ ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ, ಅಧಿಕಾರಿಗಳು ತಮಗೆ ನೀಡಲಾದ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚಂಡಮಾರುತ ವಿಪತ್ತು ನಿರ್ವಹಣೆ ಅಣಕು ಕಾರ್ಯಾಚರಣೆಯ ಪೂರ್ವಸಿದ್ಧತೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹ ವ್ಯವಹಾರಗಳ ಸಚಿವಾಲಯ, ಭಾರತ ಸರ್ಕಾರದ ನಿರ್ದೇಶನದಂತೆ, ಅಂತಾರಾಜ್ಯ ಮಟ್ಟದ ಅಣಕು ಕಾರ್ಯಾಚರಣೆ ನಡೆಯಲಿದ್ದು, ಕಾರವಾರದ ಕ್ರಿಮ್ಸ್ ಆಸ್ಪತ್ರೆ, ಕುಮಟಾ ಬಸ್ ನಿಲ್ದಾಣ, ಹೊನ್ನಾವರದ ಕಾಸರಕೋಡು ಹಿನ್ನೀರಿನ ಪ್ರದೇಶ, ಮುರುಡೇಶ್ವರ ಬೀಚ್, ತದಡಿ ಬಂದರು, ಅಂಕೋಲಾ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಚರಣೆಯ ವಿವಿಧ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದ್ದು, ಈ ಅಣಕು ಕಾರ್ಯಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲವೆಂದು ತಿಳಿಸಿದರು.
ಕಾರ್ಯಚರಣೆಯ ಅಂಗವಾಗಿ ಸಾರ್ವಜನಿಕರ ರಕ್ಷಣೆ, ಪುರ್ನವಸತಿ, ಸ್ಥಳಾಂತರ, ಚಿಕಿತ್ಸೆ ನೀಡುವ ಚಟುವಟಿಕೆಗಳಿಗೆ ಅಗತ್ಯವಿರುವ ಸ್ಥಳಗಳ ಗುರುತು ಮತ್ತು ಅಗತ್ಯವಿರುವ ಸಂಪನ್ಮೂಲಗಳನ್ನು ಸಿದ್ದಪಡಿಸಿಕೊಳ್ಳುವಂತೆ ತಿಳಿಸಿದ ಅವರು ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಲು ಆಪದ ಮಿತ್ರರು ಮತ್ತು ಸ್ವಯಂ ಸೇವಾ ಸಂಘಟನೆಗಳ ಸದಸ್ಯರ ನೆರವು ಪಡೆಯುವಂತೆ ತಿಳಿಸಿದರು.
ಈ ಅಣಕು ಕಾರ್ಯಚರಣೆಯು, ನಾವು ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಮತ್ತು ವೈದ್ಯಕೀಯ ನೆರವು ಒದಗಿಸಲು ಹೇಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುತ್ತೇವೆ ಎಂಬುದರ ಕುರಿತು ಸ್ವಯಂ ಪರೀಕ್ಷೆಯಾಗಿದ್ದು, ಈ ಚಟುವಟಿಕೆಯಲ್ಲಿ ಎಲ್ಲಾಅಧಿಕಾರಿಗಳು ನೈಜ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ತಮ್ಮ ಜವಾಬ್ದಾರಿಗಳನ್ನು ಅರಿತು ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು, ಯಾವುದೇ ರೀತಿಯ ನಿರ್ಲಕ್ಷ ತೋರಬಾರದು ಎಂದರು.
ಕಾರ್ಯಚರಣೆಯಲ್ಲಿ ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಒಟ್ಟು 34 ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದು, ಪ್ರತಿಯೊಂದು ಸ್ಥಳದಲ್ಲಿ ನೆಡೆಯುವ ಅಣಕು ಕಾರ್ಯಚರಣೆಗೆ ಇನ್ಸಿಡೆಂಟ್ ಕಮಾಂಡರ್ಗಳನ್ನಾಗಿ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ಗಳನ್ನು ನೇಮಕ ಮಾಡಲಾಗಿದ್ದು, ಈ ಸಂಪೂರ್ಣ ಕಾರ್ಯಾಚರಣೆಯ ಪರಿಶೀಲನೆ ಮತ್ತು ವೀಕ್ಷಣೆ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿಶೇಷ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.
ಚOಡಮಾರುತ ಸಮಯದಲ್ಲಿ ಕೈಗೊಳ್ಳುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು, ಸಾರ್ವಜನಿಕರಿಗೆ ನೀಡುವ ರಕ್ಷಣೆ ಮತ್ತು ವೈದ್ಯಕೀಯ ನೆರವು ಕ್ರಮಗಳ ಮೂಲಕ ವಿಪತ್ತು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಾಗಲಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್ ಮತ್ತು ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಇದ್ದರು.