ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಕಳೆದ ಏಳು ತಿಂಗಳ ಹಿಂದೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಮನೋರೋಗಿಯಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆ ವ್ಯಕ್ತಿ ಸಹಜ ಸ್ಥಿತಿಗೆ ಬಂದು, ಪಶ್ಚಿಮ ಬಂಗಾಳದ ತನ್ನ ಕುಟುಂಬವನ್ನು ಸೇರಿದ ಮಾನವೀಯ ಪ್ರಕರಣ ನಡೆದಿದೆ.
ವ್ಯಕ್ತಿ ಕಳೆದ 5 ವರ್ಷಗಳಿಂದ ಊರು ಬಿಟ್ಟಿದ್ದ. ಟೋಟೋನ್ ಬೇರಾ (58) ಪ.ಬಂಗಾಳದ ಬಗ್ನಾನ್ ಮೂಲದವನಾಗಿದ್ದು, ಬ್ರಹ್ಮಾವರದಲ್ಲಿ ಮನೋರೋಗಿಯಾಗಿ ಅದೆಷ್ಟೋ ವರ್ಷಗಳಿಂದ ಸ್ನಾನ ಮಾಡದೆ ತಿರುಗಾಡುತ್ತಿದ್ದ. ವಿಷಯ ತಿಳಿದ ವಿಶು ಶೆಟ್ಟಿಯವರು ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗೆ ದಾಖಲಿಸಿದ್ದರು.
ಜಿಲ್ಲಾಸ್ಪತ್ರೆಯ ವೈದ್ಯರ ಅವಿರತ ಶ್ರಮದಿಂದಾಗಿ ವ್ಯಕ್ತಿ ಸಹಜ ಸ್ಥಿತಿಗೆ ಬಂದು ಕುಟುಂಬ ಸೇರುವಂತಾಯಿತು. ಚಿಕಿತ್ಸೆಗೆ ಸ್ಪಂದಿಸಿದ ವ್ಯಕ್ತಿ ತನ್ನ ಊರಿನ ಕೆಲವು ಮಾಹಿತಿ ನೀಡಿದ್ದ. ಸಂತ್ರಸ್ತ ಸಹಜ ಸ್ಥಿತಿಗೆ ಬಂದ ಮೇಲೆ ಊರಿಗೆ ಹೋಗಬೇಕೆಂದು ಗೋಗರೆಯುತ್ತಿದ್ದ. ಕುಟುಂಬದ ಸಂಪರ್ಕವಾದರೂ ಅವರು ಉಡುಪಿಗೆ ಬರಲು ಹೆದರಿದ್ದರು.
ಈ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ನೀಡಿದ ಸಲಹೆಯಂತೆ ನಿರ್ಣಾಯಕ ಸಹಾಯ ದೊರೆಯಿತು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಾಜಿ ಧರ್ಮದರ್ಶಿ, ಇಂಜಿನಿಯರ್ ಹಾಗೂ ಸಂಘದ ಸ್ವಯಂಸೇವಕರಾದ ಪ್ರಸನ್ನ ದರ್ಬೆ ಅವರ ಮುಕ್ತ ಸ್ಪಂದನೆ ಮತ್ತು ಸಹಕಾರದಿಂದ ಈ ಯೋಜನೆಗೆ ಅಂತಿಮ ರೂಪ ಸಿಕ್ಕಿತು.
ಇವರೊಂದಿಗೆ ಕಟ್ಟಡ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಬಂಗಾಳದ ದೀಪಕ್ ದಾಸ್ ಅವರ ಜವಾಬ್ದಾರಿಯುತ ನಡೆಯು ರೋಗಿಯು ಕುಟುಂಬಕ್ಕೆ ಹಸ್ತಾಂತರವಾಗಲು ತುಂಬಾ ಸಹಕಾರಿಯಾಯಿತು. ದೀಪಕ್ ದಾಸ್ ಅವರು ಸಂತ್ರಸ್ತನನ್ನು ಸುಮಾರು 2150 ಕಿ.ಮೀ ದೂರದ ಬಗ್ನಾನ್ ವರೆಗೆ ಕರೆದೊಯ್ದು ಅಲ್ಲಿ ಅಣ್ಣನಿಗೆ ಹಸ್ತಾಂತರಿಸುವ ಸಮಯದಲ್ಲಿ ತಮ್ಮನನ್ನು ಆಲಂಗಿಸಿ ವಶಕ್ಕೆ ಪಡೆದ ಭಾವುಕ ಘಟನೆ ನಡೆಯಿತು. ಈ ಕುರಿತು ಸಮಾಜ ಸೇವಕ ವಿಶು ಶೆಟ್ಟಿ ಅವರು ಅಭಿಪ್ರಾಯ ವ್ಯಕ್ತಪಡಿಸಿ, "ಇಂತಹ ಸಮಾಜಮುಖಿ ಸೇವೆಗಳು ರಾಜಕೀಯ ಪಕ್ಷ ಸೇರಿದಂತೆ ಸಂಘ ಸಂಸ್ಥೆ ಅಧಿಕಾರಿಗಳ ಹಾಗೂ ಒಟ್ಟು ಸಮಾಜದ ಕಣ್ಣು ತೆರೆಯುವಂತೆ ಮಾಡುತ್ತದೆ, ಜೊತೆಗೆ ಸಮಾಜಕ್ಕಾಗಿ ದುಡಿಯಲು ಆಸಕ್ತಿ ಇದ್ದರೆ ಸಾಧ್ಯವಿದೆ ಎಂಬ ಸತ್ಯವನ್ನು ಸಾರುತ್ತದೆ" ಎಂದಿದ್ದಾರೆ.