ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ 

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸೇವಾ ತೀರ್ಥದಲ್ಲಿ ಪ್ರಗತಿ (PRAGATI) ವೇದಿಕೆಯ 54ನೇ ಸಭೆಯ ಅಧ್ಯಕ್ಷತೆ ವಹಿಸಿದರು. ಸಕ್ರಿಯ ಆಡಳಿತ ಮತ್ತು ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ಒತ್ತು ನೀಡುವ ಈ ತಂತ್ರಜ್ಞಾನ ಆಧಾರಿತ ವೇದಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ಅಡೆತಡೆಗಳನ್ನು ನಿವಾರಿಸುವ ಕುರಿತು ಚರ್ಚಿಸಿದವು. 

ಸಭೆಯಲ್ಲಿ ರೈಲ್ವೆ, ಏಕತಾ ಮಾಲ್‌ಗಳು ಹಾಗೂ ಔಷಧ ಉದ್ಯಾನವನಗಳಿಗೆ ಸಂಬಂಧಿಸಿದಂತೆ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ಪರಿಶೀಲಿಸಿದರು. ಪ್ರಧಾನಮಂತ್ರಿ ಏಕತಾ ಮಾಲ್‌ಗಳು ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು. ಕುಶಲಕರ್ಮಿಗಳ ಜೀವನೋಪಾಯವನ್ನು ಬಲಪಡಿಸುವುದರ ಜೊತೆಗೆ ಅವರ ಉದ್ಯಮಗಳ ವಿಸ್ತರಣೆಗೆ ನೆರವಾಗಬೇಕು ಎಂದು ಮೋದಿ ಹೇಳಿದರು. ಈ ಮಾಲ್‌ಗಳನ್ನು ಪ್ರವಾಸೋದ್ಯಮ ಮತ್ತು ಸ್ಥಳೀಯ ಉದ್ಯಮಗಳೊಂದಿಗೆ ಜೋಡಿಸುವಂತೆ ಕರೆ ನೀಡಿದರು. 

ಬೇಡಿಕೆ ಹೆಚ್ಚಾದರೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನೆ, ಪ್ಯಾಕೇಜಿಂಗ್, ಸಂಗ್ರಹಣೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದರು. ಮಾಲ್‌ಗಳ ನಿರ್ಮಾಣ ಪ್ರಗತಿಯನ್ನು ಮುಖ್ಯ ಕಾರ್ಯದರ್ಶಿಗಳು ನಿಯಮಿತವಾಗಿ ಪರಿಶೀಲಿಸಿ, ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು. 

ಆಂಧ್ರಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿನ ಬೃಹತ್ ಔಷಧ ಉದ್ಯಾನವನಗಳ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಿ, ಔಷಧಗಳ ತಯಾರಿಕೆಗೆ ಅಗತ್ಯವಾದ ಸಕ್ರಿಯ ಔಷಧೀಯ ಘಟಕಗಳು (API) ಮತ್ತು ಇತರ ಪ್ರಮುಖ ಕಚ್ಚಾ ಸಾಮಗ್ರಿಗಳ ದೇಶೀಯ ಉತ್ಪಾದನೆಗೆ ಆದ್ಯತೆ ನೀಡುವಂತೆ ತಿಳಿಸಿದರು. ಇದರಿಂದ ಸ್ವಾವಲಂಬನೆ ಬಲಪಡಿಸಲು ಸಾಧ್ಯವಾಗಲಿದೆ ಎಂದರು.