ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ವತಿಯಿಂದ ‘ಬಸ್ತಿ ವಿಕಾರ – ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆಯ (ಸಿಕೆಡಿ) ವಿಶೇಷ ಉಲ್ಲೇಖದೊಂದಿಗೆ’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಕಾರ್ಯಕ್ರಮ ಅ. 24 ಮತ್ತು 25ರಂದು ನಡೆಯಿತು. ನವದೆಹಲಿಯ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ (ಆರ್‌ಎವಿ) ಆಯುರ್ಜ್ಞಾನ ಯೋಜನೆಯಡಿ, ಕೇಂದ್ರ ಆಯುಷ್ ಸಚಿವಾಲಯದ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರೊಫೆಸರ್ ಎಮಿರಿಟಸ್ ಡಾ. ಮುರಳೀಧರ ಶರ್ಮ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು. ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ (ಕ್ಲಿನಿಕಲ್) ಡಾ. ನಿರಂಜನ್ ರಾವ್ ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಹಾಗೂ ಸಂಘಟನಾ ಕಾರ್ಯದರ್ಶಿ ಡಾ. ನಾಗರಾಜ್ ಎಸ್. ಸ್ವಾಗತಿಸಿ, ಡಾ. ಸರಿತಾ ಟಿ. ವಂದಿಸಿದರು. ವೈಜ್ಞಾನಿಕ ಅವಧಿಗಳಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮೂತ್ರಪಿಂಡಶಾಸ್ತ್ರ (ನೆಫ್ರಾಲಜಿ) ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ವಿನಾಯಕ ಶೆಣೈ ಸಿಕೆಡಿಯ ಸವಾಲುಗಳು ಮತ್ತು ನಿರ್ವಹಣಾ ಕ್ರಮಗಳ ಕುರಿತು ಮಾತನಾಡಿದರು. ಮಣಿಪಾಲ್ ಹೆಲ್ತ್‌ಮ್ಯಾಪ್‌ನ ಡಾ. ಪ್ರವೀಣ್ ಎನ್. ಶಾಸ್ತ್ರಿ ಮೂತ್ರಪಿಂಡ, ಮೂತ್ರನಾಳ ಮತ್ತು ಮೂತ್ರಕೋಶದ (ಕೆಯುಬಿ) ಕಾಯಿಲೆಗಳ ರೇಡಿಯಾಲಜಿ ಆಧಾರಿತ ಪತ್ತೆ ಕುರಿತು ಹಾಗೂ ಎಸ್‌ಡಿಎಂ ಆಯುರ್ವೇದ ಮತ್ತು ಸಂಬಂಧಿತ ವಿಜ್ಞಾನಗಳ ಸಂಶೋಧನಾ ಕೇಂದ್ರದ ಡಾ. ನವೀನ್ ಚಂದ್ರ ಎನ್.ಎಚ್. ಈ ಕಾಯಿಲೆಗಳ ಪ್ರಯೋಗಾಲಯ ಪತ್ತೆ ಕುರಿತು ವಿಚಾರ ಮಂಡಿಸಿದರು. ಎರಡನೇ ದಿನ ಗುಜರಾತ್‌ನ ನಡಿಯಾದ್‌ನ ಮಗನ್‌ಭಾಯ್ ಅಡೆನ್‌ವಾಲಾ ಮಹಾಗುಜರಾತ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಸ್.ಎನ್. ಗುಪ್ತ ಆಯುರ್ವೇದದಲ್ಲಿ ಸಿಕೆಡಿಯ ತಿಳುವಳಿಕೆ ಮತ್ತು ಚಿಕಿತ್ಸೆ ಕುರಿತು

ಎರಡು ಅವಧಿಗಳಲ್ಲಿ ಉಪನ್ಯಾಸ ನೀಡಿದರು. ಡಾ. ಪ್ರಸನ್ನ ಎನ್. ಮೊಗಸಾಲೆ ಬಸ್ತಿ ವಿಕಾರದ ಕ್ಲಿನಿಕಲ್ ಅಂಗರಚನೆ ಮತ್ತು ರೋಗೋತ್ಪತ್ತಿ ಕುರಿತು ಮಾತನಾಡಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು.

ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ವಿವಿಧ ಆಯುರ್ವೇದ ಕಾಲೇಜುಗಳಿಂದ ಸುಮಾರು 50 ಅಧ್ಯಾಪಕರು ಭಾಗವಹಿಸಿದ್ದರು. ಹೆಚ್ಚುತ್ತಿರುವ ಸಿಕೆಡಿ ಪ್ರಕರಣಗಳ ಹಿನ್ನೆಲೆಯಲ್ಲಿ, ಮೂತ್ರ ಸಂಬಂಧಿ ಕಾಯಿಲೆಗಳ ಕುರಿತ ಆಯುರ್ವೇದದ ಶಾಸ್ತ್ರೀಯ ತಿಳುವಳಿಕೆ ಮತ್ತು ಆಧುನಿಕ ರೋಗಪತ್ತೆ ವಿಧಾನಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಸಮಾರೋಪ ಸಮಾರಂಭದಲ್ಲಿ ಮೂಡುಬಿದಿರೆಯ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ ಸಮಾರೋಪ ಭಾಷಣ ಮಾಡಿದರು. ಡಾ. ಮಮತಾ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಸದಾನಂದ ಕೆ. ಸ್ವಾಗತಿಸಿ, ಡಾ. ಅರುಣ್ ಕುಮಾರ್ ಎಂ. ವಂದಿಸಿದರು. ಡಾ. ಗೀತಾಂಜಲಿ ಕಾರ್ಯಕ್ರಮ ನಿರೂಪಿಸಿದರು.