ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ 

ಮಣಿಪಾಲದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ)ಯ ಪ್ರಮುಖ ಮಾಧ್ಯಮ ಉತ್ಸವ ‘ಆರ್ಟಿಕಲ್-19’ಕ್ಕೆ ಅಕ್ಟೋಬರ್ 30ರಂದು ಚಾಲನೆ ನೀಡಲಾಯಿತು. ಮಾಹೆ ಮಣಿಪಾಲದ ಉಪಕುಲಪತಿ ಡಾ. ಶರತ್ ಕೆ. ರಾವ್ ಹಾಗೂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಹಾಗೂ ಲಿಟಲ್ ಲ್ಯಾಂಬ್ ಫಿಲ್ಮ್ಸ್‌ನ ಸಹ-ಸಂಸ್ಥಾಪಕ ಬೌದ್ಧಾಯನ್ ಮುಖರ್ಜಿ ಉತ್ಸವವನ್ನು ಉದ್ಘಾಟಿಸಿದರು. ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಚರ್ಚಾ ಸ್ಪರ್ಧೆ ‘ಪ್ರೊವರ್ಬ್’ಕೂಡ ಈ ಬಾರಿ ಮರುಆರಂಭಗೊಂಡಿದ್ದು, ಉತ್ಸವದೊಂದಿಗೆ ಉದ್ಘಾಟಿಸಲಾಯಿತು. 

‘ಯುದ್ಧ ಮತ್ತು ಶಾಂತಿ’ಎಂಬುದು ಆರ್ಟಿಕಲ್-19ರ-2026ರ ಉತ್ಸವದ ವಿಷಯವಾಗಿದೆ. ಜಾಗತಿಕವಾಗಿ ನಡೆಯುತ್ತಿರುವ ವಿವಿಧ ವಿದ್ಯಮಾನಗಳನ್ನು ಚರ್ಚಿಸುವ ಉದ್ದೇಶದಿಂದ ಈ ವಿಷಯವನ್ನು ಆಯ್ಕೆ ಮಾಡಲಾಗಿದೆ. 

ಕಾರ್ಯಕ್ರಮದಲ್ಲಿ ಮಾತನಾಡಿದ ಉಪಕುಲಪತಿ ಡಾ. ಶರತ್ ಕೆ. ರಾವ್, ಸಾಮಾಜಿಕ ಮಾಧ್ಯಮ, ತಪ್ಪು ಮಾಹಿತಿ ಮತ್ತು ಪರಸ್ಪರ ವಿರುದ್ಧವಾದ ನಿರೂಪಣೆಗಳು ಇಂದು ಸಂಘರ್ಷಕ್ಕೆ ಕಾರಣವಾಗಿವೆ. ಶಾಂತಿ ಸ್ಥಾಪನೆಗೆ ಸಂವಾದ, ಮಾತುಕತೆ ಮತ್ತು ಕಾರ್ಯತಂತ್ರದ ಮೈತ್ರಿಗಳು ಮುಖ್ಯ ಎಂದು ಹೇಳಿದರು. 

ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಅವರು, ಎಐ ಕೆಲವೇ ಸೆಕೆಂಡುಗಳಲ್ಲಿ ವಿಷಯವನ್ನು ಸೃಷ್ಟಿಸಬಲ್ಲದು. ಆದರೆ ವ್ಯಕ್ತಿತ್ವವನ್ನು ರೂಪಿಸಲು ಅಥವಾ ಜ್ಞಾನವನ್ನು ನೀಡಲು ಸಾಧ್ಯವಿಲ್ಲ ಎಂದರು. ವಿದ್ಯಾರ್ಥಿಗಳು ಕೇವಲ ವಿಷಯ ಸೃಷ್ಟಿಸುವುದಕ್ಕಿಂತ ವಿಶ್ವಾಸಾರ್ಹತೆಯನ್ನು ಬೆಳೆಸಿಕೊಳ್ಳಬೇಕು. ಅದುವೇ ಅವರನ್ನು ಇತರರಿಂದ ವಿಭಿನ್ನವಾಗಿಸುತ್ತದೆ ಎಂದು ಸಲಹೆ ನೀಡಿದರು. ಜನರು ಪರಸ್ಪರ ಆಲಿಸುವುದನ್ನು ನಿಲ್ಲಿಸಿದಾಗ ಯುದ್ಧ ಆರಂಭವಾಗುತ್ತದೆ; ಪರಸ್ಪರ ಅರ್ಥಮಾಡಿಕೊಳ್ಳಲು ಆರಂಭಿಸಿದಾಗ ಶಾಂತಿ ನೆಲೆಸುತ್ತದೆ ಎಂದು ಅವರು ಹೇಳಿದರು. 

ಮುಖ್ಯ ಭಾಷಣ ಮಾಡಿದ ಬೌದ್ಧಾಯನ್ ಮುಖರ್ಜಿ, ಕ್ಯಾಮೆರಾದ ಹಿಂದಿನ ನಿರ್ಧಾರಗಳು ಪ್ರೇಕ್ಷಕರು ಘಟನೆಗಳನ್ನು ನೋಡುವ ರೀತಿಯನ್ನು ರೂಪಿಸುತ್ತವೆ. ದೃಶ್ಯ ಸಂಯೋಜನೆ, ಧ್ವನಿ ಮತ್ತು ಸಂಕಲನದಂತಹ ಅಂಶಗಳು ಪ್ರೇಕ್ಷಕರ ಗ್ರಹಿಕೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ವಿವರಿಸಿದರು. ಬಳಿಕ ನಡೆದ ಸಂವಾದದಲ್ಲಿ, ನಿರ್ದೇಶಕನೊಬ್ಬನ ಚಿತ್ರವು ಒಬ್ಬ ವ್ಯಕ್ತಿಯ ಜೀವನದ ಮೇಲಾದರೂ ಸಕಾರಾತ್ಮಕ ಪರಿಣಾಮ ಬೀರಿದರೆ ಅದು ಯಶಸ್ವಿ ಚಿತ್ರವಾಗುತ್ತದೆ ಎಂದು ಹೇಳಿದರು. 

ಉತ್ಸವದ ಅಂಗವಾಗಿ ಎಂಐಸಿ ವಿದ್ಯಾರ್ಥಿಗಳು ರೂಪಿಸಿದ ಯೋಜನೆಗಳ ಪ್ರದರ್ಶನವೂ ನಡೆಯಿತು. ಛಾಯಾಗ್ರಹಣ, ಜಾಹೀರಾತು ಮತ್ತು ದೃಶ್ಯ ಕಥನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಈ ಪ್ರದರ್ಶನ ಪರಿಚಯಿಸಿತು. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಪ್ರತಿನಿಧಿಗಳು ಉತ್ಸವದಲ್ಲಿ ಪಾಲ್ಗೊಂಡು ‘ಬ್ರ್ಯಾಂಡ್ ಸ್ವಾಪ್’, ‘ಮಾಕ್ ಮುನ್’, ‘ಮೀಡಿಯಾ ಎಸ್ಕೇಪ್ ರೂಮ್’ ಮತ್ತು ‘ಸ್ಕ್ಯಾವೆಂಜರ್ ಹಂಟ್’ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.