ಇಂದ್ರಾಳಿ ಸ್ಥಳದಲ್ಲಿ ಜಾಗದ ಕೊರತೆ; ಎಂಜಿಎಂ ಕಾಲೇಜು ಎದುರು ಫುಟ್ ಓವರ್ ಬ್ರಿಡ್ಜ್

ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಇಂದ್ರಾಳಿ ರೈಲ್ವೆ ಮೇಲ್ಸೇತುವೆ (ROB) ಸಮೀಪ ಫುಟ್ ಓವರ್ ಬ್ರಿಡ್ಜ್ (FOB) ನಿರ್ಮಿಸಲು ಅಗತ್ಯ ಜಾಗದ ಕೊರತೆಯಿರುವ ಹಿನ್ನೆಲೆಯಲ್ಲಿ, ಉಡುಪಿ ನಗರಸಭೆ (CMC) ರಾಷ್ಟ್ರೀಯ ಹೆದ್ದಾರಿ 169ಎಯ ಎಂಜಿಎಂ ಕಾಲೇಜು ಎದುರು ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಯೋಜಿಸಿದೆ. ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ ಎಂದು ನಗರಸಭೆ ಮೂಲಗಳು ಕೋಸ್ಟಲ್ ಟಾಕ್ ನ್ಯೂಸ್‌ಗೆ ತಿಳಿಸಿವೆ. 

ಯೋಜನೆಯ ಕಾಮಗಾರಿಗೆ ನಿಯೋಜಿಸಲಾಗಿರುವ ಏಜೆನ್ಸಿಯು ಈಗಾಗಲೇ ಸೆಂಟರಿಂಗ್ ಕಾಮಗಾರಿ ಆರಂಭಿಸಿದ್ದು, ಮುಖ್ಯ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಸ್ತಾವಿತ ಫುಟ್ ಓವರ್ ಬ್ರಿಡ್ಜ್‌ನಿಂದ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳಿಗೆ, ವಿಶೇಷವಾಗಿ ಪೀಕ್ ಅವಧಿಯಲ್ಲಿ, ಹೆದ್ದಾರಿ ದಾಟಲು ಸುರಕ್ಷಿತ ವ್ಯವಸ್ಥೆ ದೊರೆಯಲಿದೆ. ಎಂಜಿಎಂ ಕಾಲೇಜು ಎದುರಿನ ಈ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರವಿದ್ದು, ಹೆದ್ದಾರಿ ದಾಟುವ ವೇಳೆ ವಿದ್ಯಾರ್ಥಿಗಳು ಅಪಘಾತಕ್ಕೀಡಾದ ಹಲವು ಘಟನೆಗಳು ನಡೆದಿವೆ. ಈ ಸ್ಥಳದಲ್ಲಿ ಫುಟ್ ಓವರ್ ಬ್ರಿಡ್ಜ್ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. 

ಈ ಹಿಂದೆ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಸಮೀಪ ಎನ್‌ಎಚ್‌ 169ಎ ದಾಟಲು ಹಾಗೂ ಉಡುಪಿ ರೈಲ್ವೆ ನಿಲ್ದಾಣಕ್ಕೆ ತೆರಳುವ ಪಾದಚಾರಿಗಳಿಗೆ ಅನುಕೂಲವಾಗುವಂತೆ ಎಫ್‌ಒಬಿ ನಿರ್ಮಿಸಲು ಉಡುಪಿ ನಗರಸಭೆ ಯೋಜಿಸಿತ್ತು. ಆದರೆ ಅಗತ್ಯ ಜಾಗದ ಕೊರತೆಯಿಂದಾಗಿ ಯೋಜನೆ ವಿಳಂಬವಾಗಿದೆ. 

ಇದಕ್ಕೆ 33 ಕೆವಿ ವಿದ್ಯುತ್ ಮಾರ್ಗವೂ ಅಡ್ಡಿಯಾಗಿದೆ. ಎನ್‌ಎಚ್‌ 169ಎ ಅಗಲೀಕರಣದ ಸಂದರ್ಭದಲ್ಲಿ ಮಣಿಪಾಲ-ಕುಂಜಿಬೆಟ್ಟು ನಡುವಿನ 33 ಕೆವಿ ವಿದ್ಯುತ್ ಮಾರ್ಗವನ್ನು ಭೂಗತವಾಗಿ ಸ್ಥಳಾಂತರಿಸುವಂತೆ ಪಿಡಬ್ಲ್ಯುಡಿಯ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಮೆಸ್ಕಾಂ ಸೂಚಿಸಿತ್ತು. ಆದರೆ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಗಿತ್ತು. 

ಕಳೆದ ಸೆಪ್ಟೆಂಬರ್‌ನಲ್ಲಿ ಹೊಸ ಬೋಸ್ಟ್ರಿಂಗ್ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ಬಳಿಕ ವಾಹನ ಸಂಚಾರ ಸುಧಾರಿಸಿದೆ. ಆದರೆ ವಿದ್ಯಾರ್ಥಿಗಳು ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಸೇರಿದಂತೆ ಪಾದಚಾರಿಗಳಿಗೆ ಹೆದ್ದಾರಿ ದಾಟಲು ಇನ್ನೂ ತೊಂದರೆ ಇದೆ. 

ವಿದ್ಯುತ್ ಮಾರ್ಗ ಸ್ಥಳಾಂತರಕ್ಕಾಗಿ ಉಡುಪಿ ನಗರಸಭೆ ರೂ.4.50 ಲಕ್ಷ ಮೀಸಲಿಟ್ಟಿದ್ದು, ಮೆಸ್ಕಾಂಗೆ ಶೇ.5ರಷ್ಟು ಮೇಲ್ವಿಚಾರಣಾ ಶುಲ್ಕ ಪಾವತಿಸಲು ಸಹ ಒಪ್ಪಿಕೊಂಡಿದೆ. ಆದರೆ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಯೋಜನೆಯನ್ನು ಮೆಸ್ಕಾಂ ಇನ್ನೂ ಅಂತಿಮಗೊಳಿಸಬೇಕಿದೆ ಎಂದು ಮೂಲಗಳು ತಿಳಿಸಿವೆ