ಆರ್ಥಿಕ ಸಂಕಷ್ಟದಿಂದ ಶೈಕ್ಷಣಿಕ ಸಾಧನೆಯತ್ತ; NFSC ನೆರವಿನಿಂದ ತೆಲಂಗಾಣದ ಯತ್ಲಾ ಶ್ರಾವಣ್ತಿ ಪಯಣ
ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ
ಸಮಯೋಚಿತವಾಗಿ ದೊರೆಯುವ ಸಂಸ್ಥೆಯ ನೆರವು ಆರ್ಥಿಕ ಹಾಗೂ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸಲು ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಮಹತ್ವದ ಬೆಂಬಲವಾಗಬಲ್ಲದು. ಇದಕ್ಕೆ ಉದಾಹರಣೆಯಾಗಿದ್ದಾರೆ ತೆಲಂಗಾಣದ ಕರೀಂನಗರ ಜಿಲ್ಲೆಯ 37 ವರ್ಷದ ಯತ್ಲಾ ಶ್ರಾವಣ್ತಿ.
ಸಸ್ಯಶಾಸ್ತ್ರದಲ್ಲಿ ಸಂಶೋಧನೆ ನಡೆಸಿದ ಶ್ರಾವಣ್ತಿ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಫೆಲೋಶಿಪ್ ಫಾರ್ ಶೆಡ್ಯೂಲ್ಡ್ ಕಾಸ್ಟ್ (NFSC) ಯೋಜನೆಯಡಿ ದೊರೆತ ಆರ್ಥಿಕ ನೆರವಿನಿಂದ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 2017ರಲ್ಲಿ ಆರಂಭವಾದ ಫೆಲೋಶಿಪ್ ನೆರವಿನಡಿ ಅವರಿಗೆ ಫೆಲೋಶಿಪ್, ಮನೆ ಬಾಡಿಗೆ ಭತ್ಯೆ (HRA) ಹಾಗೂ ಕಾಂಟಿಂಜೆನ್ಸಿ ನೆರವು ಸೇರಿದಂತೆ ಒಟ್ಟು ಸುಮಾರು ರೂ.21 ಲಕ್ಷ ಸಹಾಯ ದೊರೆತಿದೆ.
ಫೆಲೋಶಿಪ್ ದೊರೆಯುವ ಮೊದಲು ಶ್ರಾವಣ್ತಿ ಉನ್ನತ ಶಿಕ್ಷಣ ಮತ್ತು ಡಾಕ್ಟರಲ್ ಸಂಶೋಧನೆಯನ್ನು ಮುಂದುವರಿಸಲು ಹಲವು ಆರ್ಥಿಕ ಸವಾಲುಗಳನ್ನು ಎದುರಿಸಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಪುಸ್ತಕಗಳು, ಸಂಶೋಧನಾ ಸಾಮಗ್ರಿಗಳು, ಉಪಕರಣಗಳು ಹಾಗೂ ಹಾಸ್ಟೆಲ್ ವಸತಿ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಭರಿಸುವುದು ಕಷ್ಟವಾಗಿತ್ತು. ಇದರಿಂದ ಅಧ್ಯಯನ ಮತ್ತು ಸಂಶೋಧನೆಯ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವುದೂ ಸವಾಲಾಗಿತ್ತು.
ಇದರ ಜೊತೆಗೆ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳು, ಇಂಟರ್ನೆಟ್ ಸೌಲಭ್ಯ ಮತ್ತು ಸೂಕ್ತ ಶೈಕ್ಷಣಿಕ ಮಾರ್ಗದರ್ಶನದ ಸೀಮಿತ ಲಭ್ಯತೆಯೂ ಸಮಸ್ಯೆಯಾಗಿತ್ತು. ದೂರದ ಪ್ರದೇಶದಿಂದ ಬಂದಿದ್ದ ಶ್ರಾವಣ್ತಿ ಸಾಮಾಜಿಕ ಹಾಗೂ ಆರ್ಥಿಕ ಸವಾಲುಗಳ ನಡುವೆಯೇ ಡಾಕ್ಟರೇಟ್ ಶಿಕ್ಷಣ ಮುಂದುವರಿಸಬೇಕಾಗಿತ್ತು. ಆರ್ಥಿಕ ನೆರವು ದೊರೆಯದಿದ್ದರೆ ಸಾಲ ಮಾಡಬೇಕಾಗುತ್ತಿತ್ತು ಅಥವಾ ಶಿಕ್ಷಣವನ್ನು ಸ್ಥಗಿತಗೊಳಿಸಿ ಉದ್ಯೋಗ ಹುಡುಕುವ ಅನಿವಾರ್ಯತೆ ಎದುರಾಗಬಹುದಿತ್ತು.
NFSC ನೆರವು ಶ್ರಾವಣ್ತಿಗೆ ಆರ್ಥಿಕ ಸ್ಥಿರತೆ ಒದಗಿಸಿದೆ. ಮಾಸಿಕ ಫೆಲೋಶಿಪ್ನಿಂದ ಶಿಕ್ಷಣ ಮತ್ತು ಜೀವನ ನಿರ್ವಹಣೆಯ ವೆಚ್ಚದ ಒತ್ತಡ ಕಡಿಮೆಯಾದರೆ, ಕಾಂಟಿಂಜೆನ್ಸಿ ನೆರವಿನಿಂದ ಅಗತ್ಯ ಪುಸ್ತಕಗಳು, ಸಂಶೋಧನಾ ಸಾಮಗ್ರಿಗಳು ಹಾಗೂ ಸಾಫ್ಟ್ವೇರ್ಗಳನ್ನು ಖರೀದಿಸಲು ಸಾಧ್ಯವಾಯಿತು. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಂಶೋಧನಾ ಫಲಿತಾಂಶಗಳನ್ನು ಮಂಡಿಸಲು, ತಜ್ಞರೊಂದಿಗೆ ಸಂವಾದ ನಡೆಸಲು ಹಾಗೂ ಶೈಕ್ಷಣಿಕ ಸಂಪರ್ಕಗಳನ್ನು ಬೆಳೆಸಲು ಸಹ ಫೆಲೋಶಿಪ್ ನೆರವಾಯಿತು.
ಈ ನೆರವಿನಿಂದ ಶ್ರಾವಣ್ತಿ ಆತ್ಮವಿಶ್ವಾಸದಿಂದ ಸಂಶೋಧನೆ ಮುಂದುವರಿಸಿ ತಮ್ಮ ಶೈಕ್ಷಣಿಕ ಕಾರ್ಯವನ್ನು ಪೂರ್ಣಗೊಳಿಸಿದರು. ಫೆಲೋಶಿಪ್ ಅವರ ಸಂಶೋಧನಾ ಪ್ರೊಫೈಲ್ನ್ನು ಬಲಪಡಿಸುವುದರ ಜೊತೆಗೆ ವೃತ್ತಿಪರ ಸಂಪರ್ಕಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಿತು. ಕುಟುಂಬದ ಮೇಲಿದ್ದ ಆರ್ಥಿಕ ಒತ್ತಡ ಕಡಿಮೆಯಾದ ಪರಿಣಾಮ ವೈಯಕ್ತಿಕವಾಗಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯೂ ಹೆಚ್ಚಾಯಿತು.
ಪ್ರಸ್ತುತ ಶ್ರಾವಣ್ತಿ ಉನ್ನತ ಶಿಕ್ಷಣ ಅಥವಾ ನೀತಿ ಸಂಶೋಧನಾ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳುವ ಆಶಯ ಹೊಂದಿದ್ದಾರೆ. ಹಿಂದುಳಿದ ಹಾಗೂ ಅವಕಾಶ ವಂಚಿತ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ತಮ್ಮ ಶೈಕ್ಷಣಿಕ ಅನುಭವವನ್ನು ಬಳಸಿಕೊಳ್ಳುವ ಉದ್ದೇಶವನ್ನೂ ಅವರು ಹೊಂದಿದ್ದಾರೆ.
ಆರ್ಥಿಕ ನೆರವು ಸಮಯೋಚಿತವಾಗಿ ದೊರೆತರೆ ಆರ್ಥಿಕ ಮತ್ತು ಸಾಮಾಜಿಕ ಅಡೆತಡೆಗಳನ್ನು ಮೀರಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಮುನ್ನಡೆಯಲು ಸಾಧ್ಯ ಎಂಬುದನ್ನು ಶ್ರಾವಣ್ತಿಯ ಪಯಣ ತೋರಿಸುತ್ತದೆ.