ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ
ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಾಗೂ ಸ್ವಸಹಾಯ ಗುಂಪುಗಳ ಮೂಲಕ ಸುಸ್ಥಿರ ಜೀವನೋಪಾಯ ಚಟುವಟಿಕೆಗಳನ್ನು ರೂಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ‘ಅಕ್ಕ ಕೆಫೆಯೋಜನೆಯು, ಸಂಜೀವಿನಿ ಎನ್ಆರ್ಎಲ್ಎಂ ಯೋಜನೆಯಡಿ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಹೋಟೆಲ್ ಉದ್ಯಮದ ಮೂಲಕ ಆದಾಯದ ಅವಕಾಶ ಕಲ್ಪಿಸುವ ಜೊತೆಗೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ದಿಕ್ಕು ನೀಡುತ್ತಿದೆ.
ಅಕ್ಕ ಕೆಫೆಗಳ ಮೂಲಕ ಮಹಿಳೆಯರು ಆಹಾರ ತಯಾರಿಕೆ, ಮಾರಾಟ, ಗ್ರಾಹಕರ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸ್ವಂತ ಉದ್ಯಮವನ್ನು ಯಶಸ್ವಿಯಾಗಿ ನಡೆಸುವ ಅವಕಾಶ ಪಡೆಯುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯೋಗದಾತರಾಗುವ ಸಾಮರ್ಥ್ಯವೂ ವೃದ್ಧಿಯಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ಕ ಕೆಫೆ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಈಗಾಗಲೇ ಕಾರವಾರ ಮತ್ತು ಮುರುಡೇಶ್ವರದಲ್ಲಿ ಅಕ್ಕ ಕೆಫೆಗಳು ಕಾರ್ಯಾರಂಭ ಮಾಡಿವೆ. ಕಾರವಾರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶ್ರೀ ಸಿದ್ಧಿ ವಿನಾಯಕ ಮಹಿಳಾ ಸ್ವಸಹಾಯ ಗುಂಪು, ಕಡವಾಡ ಇವರಿಂದ 2025ರ ಜುಲೈನಲ್ಲಿ ಅಕ್ಕ ಕೆಫೆ ಆರಂಭಿಸಲಾಗಿದ್ದು, ಆರಂಭವಾದ ದಿನದಿಂದ ಇದುವರೆಗೆ ಸುಮಾರು ರೂ. 26 ಲಕ್ಷದಷ್ಟು ವ್ಯವಹಾರ ನಡೆಸಿರುವುದು ಮಹಿಳೆಯರ ಉದ್ಯಮಶೀಲತೆಗೆ ಸಾಕ್ಷಿಯಾಗಿದೆ. ಅದೇ ರೀತಿ, ಮುರುಡೇಶ್ವರದಲ್ಲಿ ಶ್ರೀ ಮಹಾ ಮುರುಡೇಶ್ವರ ಸ್ವಸಹಾಯ ಗುಂಪಿನ ವತಿಯಿಂದ 2025ರ ಅಕ್ಟೋಬರ್ನಲ್ಲಿ ಅಕ್ಕ ಕೆಫೆ ಆರಂಭಿಸಲಾಗಿದ್ದು, ಇದುವರೆಗೆ ಸುಮಾರು ರೂ.18 ಲಕ್ಷದಷ್ಟ್ಟು ವ್ಯವಹಾರ ನಡೆಸಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಅಕ್ಕ ಕೆಫೆ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ಹೊನ್ನಾವರ, ಕುಮಟಾ, ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಲ್ಲಿ ಅಕ್ಕ ಕೆಫೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿವೆ. ಇದರಿಂದ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಮಹಿಳೆಯರಿಗೆ ಉದ್ಯಮದ ಅವಕಾಶಗಳು ಮತ್ತಷ್ಟ್ಟು ವಿಸ್ತರಿಸುವ ನಿರೀಕ್ಷೆಯಿದೆ.
ಅಕ್ಕ ಕೆಫೆ ಕೇವಲ ಆಹಾರ ಮಾರಾಟದ ಕೇಂದ್ರವಾಗಿರದೆ, ಗ್ರಾಮೀಣ ಮಹಿಳೆಯರ ಪರಿಶ್ರಮ, ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ವೇದಿಕೆಯಾಗಿ ರೂಪುಗೊಳ್ಳುತ್ತಿದೆ. ಸ್ವಸಹಾಯ ಗುಂಪುಗಳ ಮಹಿಳೆಯರು ಸ್ವಂತ ಆದಾಯ ಗಳಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೂ ಕೊಡುಗೆ ನೀಡುತ್ತಿದ್ದಾರೆ. ಕಾರವಾರ ಮತ್ತು ಮುರುಡೇಶ್ವರದ ಅಕ್ಕ ಕೆಫೆಗಳು ಈಗಾಗಲೇ ಸಾಧಿಸಿರುವ ವ್ಯವಹಾರಿಕ ಯಶಸ್ಸು, ಗ್ರಾಮೀಣ ಮಹಿಳೆಯರು ಅವಕಾಶ ದೊರೆತರೆ ಉತ್ತಮ ಉದ್ಯಮಿಗಳಾಗಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಅಕ್ಕ ಕೆಫೆ ವಿಸ್ತರಣೆಯಾಗುತ್ತಿರುವುದು ಈ ಯಶಸ್ಸಿನ ಮುಂದಿನ ಹೆಜ್ಜೆಯಾಗಿದೆ. ಹೊಸ ಅಕ್ಕ ಕೆಫೆಗಳ ಮೂಲಕ ಇನ್ನಷ್ಟು ಮಹಿಳೆಯರಿಗೆ ಉದ್ಯೋಗದಿಂದ ಉದ್ಯಮದತ್ತ, ಅವಲಂಬನೆಯಿAದ ಸ್ವಾವಲಂಬನೆಯತ್ತ ಹಾಗೂ ಸಣ್ಣ ಅವಕಾಶಗಳಿಂದ ದೊಡ್ಡ ಕನಸುಗಳತ್ತ ಸಾಗುವ ಅವಕಾಶ ದೊರೆಯಲಿದೆ.
ಸಂಜೀವಿನಿ ಎನ್ಆರ್ಎಲ್ಎಂ ಯೋಜನೆಯಡಿ ಅಕ್ಕ ಕೆಫೆ ಆರಂಭಕ್ಕೆ ದೊರೆತ ಈ ಅವಕಾಶ ನಮ್ಮ ಬದುಕಿಗೆ ಹೊಸ ದಾರಿ ತೋರಿಸಿದೆ. 5 ಮಂದಿಯ ನಮ್ಮ ತಂಡವು, ಆಹಾರ ತಯಾರಿಕೆ ಮತ್ತು ಮಾರಾಟದ ಜೊತೆಗೆ ಗ್ರಾಹಕರೊಂದಿಗೆ ಆತ್ಮವಿಶ್ವಾಸದಿಂದ ವ್ಯವಹರಿಸುವುದು, ಲೆಕ್ಕಪತ್ರ ನಿರ್ವಹಣೆ ಹಾಗೂ ಉದ್ಯಮವನ್ನು ವ್ಯವಸ್ಥಿತವಾಗಿ ನಡೆಸುವುದನ್ನೂ ಕಲಿತಿದ್ದೇವೆ. ದೆಹಲಿ, ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿ ನಡೆದ ‘ಸರಸ್ ಮೇಳಗಳಲ್ಲಿ ಭಾಗವಹಿಸಿ ವ್ಯವಹಾರಿಕ ಅನುಭವ ಪಡೆದಿದ್ದೇವೆ. ಕೆಫೆಯಿಂದ ಸ್ವಂತ ಆದಾಯ ಗಳಿಸುವ ಅವಕಾಶ ದೊರೆತಿದ್ದು, ಪ್ರತೀ ತಿಂಗಳು ರೂ.1 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದ್ದು, ಕುಟುಂಬದ ಆರ್ಥಿಕ ಸ್ಥಿತಿಗೆ ಉತ್ತಮಗೊಂಡಿದೆ. ಇದರಿಂದ ಆತ್ಮವಿಶ್ವಾಸ, ನಿರ್ಧಾರ ಕೈಗೊಳ್ಳುವ ಧೈರ್ಯ ಹೆಚ್ಚಿದೆ. ಆದಾಯವನ್ನು ಕುಟುಂಬದ ಅಗತ್ಯಗಳಿಗೆ ಬಳಸುವುದರ ಜೊತೆಗೆ ಭವಿಷ್ಯಕ್ಕಾಗಿ ಉಳಿತಾಯ ಮಾಡುವ ವಿಶ್ವಾಸ ಬಂದಿದೆ. ಗ್ರಾಹಕರ ಮೆಚ್ಚುಗೆ ನಮ್ಮಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅಕ್ಕ ಕೆಫೆಯನ್ನು ಉತ್ತಮವಾಗಿ ನಿರ್ವಹಿಸಿ, ನಮ್ಮ ಆದಾಯ ಹೆಚ್ಚಿಸಿ ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಭವಿಷ್ಯವನ್ನು ಭದ್ರಪಡಿಸುವುದರ ಜೊತೆಗೆ, ಇನ್ನಷ್ಟ್ಟು ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅಕ್ಕ ಕೆಫೆ ಪ್ರೇರಣೆಯಾಗಬೇಕು ಎಂಬುದು ನಮ್ಮ ಆಶಯ, ಎನ್ನುತ್ತಾರೆ, ಶ್ರೀ ಮಹಾ ಮುರುಡೇಶ್ವರ ಸ್ವ ಸಹಾಯ ಗುಂಪು, ಮುರುಡೇಶ್ವರ ಇದರ ಸದಸ್ಯರಾದ ಕಲಾ ಅವರು.