ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ 2025-26ನೇ ಸಾಲಿನ ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಮತ್ತು ಉತ್ಪಾದನೆಯ ಮೂರನೇ ಮುಂಗಡ ಅಂದಾಜುಗಳನ್ನು ಬಿಡುಗಡೆ ಮಾಡಿದ್ದು, ದೇಶದ ರೈತರಿಗೆ ಆಶಾದಾಯಕ ಸುದ್ದಿ ನೀಡಿದ್ದಾರೆ.
ಇತ್ತೀಚಿನ ಅಂದಾಜಿನ ಪ್ರಕಾರ, 2025-26ನೇ ಸಾಲಿನಲ್ಲಿ ಭಾರತದ ಒಟ್ಟು ತೋಟಗಾರಿಕಾ ಉತ್ಪಾದನೆಯು 3,869.15 ಲಕ್ಷ ಟನ್ಗಳಿಗೆ ತಲುಪುವ ನಿರೀಕ್ಷೆಯಿದೆ. ಇದು 2024-25ನೇ ಸಾಲಿನಲ್ಲಿ ದಾಖಲಾದ 3,707.38 ಲಕ್ಷ ಟನ್ಗಳಿಗೆ ಹೋಲಿಸಿದರೆ 161.77 ಲಕ್ಷ ಟನ್ಗಳಷ್ಟು (ಶೇ. 4.36) ಹೆಚ್ಚಳವಾಗಿದೆ.
ಉತ್ಪಾದನೆಯಲ್ಲಿ ನಿರೀಕ್ಷಿತ ಏರಿಕೆಗೆ ಸಂತಸ ವ್ಯಕ್ತಪಡಿಸಿದ ಚೌಹಾಣ್, ತೋಟಗಾರಿಕಾ ಉತ್ಪಾದನೆಯಲ್ಲಿನ ಗಣನೀಯ ಹೆಚ್ಚಳವು ಭಾರತದ ರೈತರ ಪರಿಶ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ರೈತಪರ ನೀತಿಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಈ ದಾಖಲೆಯ ಉತ್ಪಾದನೆಯು ದೇಶದ ಪೌಷ್ಟಿಕಾಂಶ ಭದ್ರತೆಯನ್ನು ಬಲಪಡಿಸುವುದರ ಜತೆಗೆ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ರೈತರ ಆದಾಯ ಹೆಚ್ಚಳಕ್ಕೂ ನೇರವಾಗಿ ಕೊಡುಗೆ ನೀಡಲಿದೆ ಎಂದರು. ದೇಶದಾದ್ಯಂತದ ರೈತರ ಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದ ಅವರು, ಈ ಸಾಧನೆಗಾಗಿ ರೈತರನ್ನು ಅಭಿನಂದಿಸಿದರು.
ಭಾರತೀಯ ಕೃಷಿ ಕ್ಷೇತ್ರದಲ್ಲಿ ಮಹತ್ವದ ಹಾಗೂ ಆಶಾದಾಯಕ ಬೆಳೆ ವೈವಿಧ್ಯೀಕರಣ ನಡೆಯುತ್ತಿದೆ ಎಂದು ಚೌಹಾಣ್ ಅಭಿಪ್ರಾಯಪಟ್ಟರು. ರೈತರು ಸಾಂಪ್ರದಾಯಿಕ ಬೆಳೆಗಳ ಜತೆಗೆ ಹಣ್ಣುಗಳು, ತರಕಾರಿಗಳು, ಹೂವುಗಳು, ಗೋಡಂಬಿ, ತೆಂಗು ಮತ್ತು ಕೋಕೋ ಸೇರಿದಂತೆ ತೋಟಗಾರಿಕಾ ಬೆಳೆಗಳು ಮತ್ತು ಸುಗಂಧ ಹಾಗೂ ಔಷಧೀಯ ಸಸ್ಯಗಳ ಕೃಷಿಯತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದರು.
ವಾಣಿಜ್ಯಿಕ ಹಾಗೂ ಅಧಿಕ ಮೌಲ್ಯದ ಬೆಳೆಗಳ ಕೃಷಿಯತ್ತ ರೈತರ ಒಲವು ಹೆಚ್ಚುತ್ತಿರುವುದು ಅವರ ಆದಾಯಕ್ಕೆ ಹೊಸ ಅವಕಾಶಗಳನ್ನು ತೆರೆದಿಡುತ್ತಿದೆ. ಅಲ್ಲದೆ, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದರು.