ಪ್ರಕಾಶ್ ಸಾಮಗ 

ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ 

ಪರಿಷ್ಕೃತ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯಲ್ಲಿ 46.57 ಕಿ.ಮೀ. ಉದ್ದದ ಮುಖ್ಯ ಸುರಂಗ ಹಾಗೂ 13.80 ಕಿ.ಮೀ. ಉದ್ದದ ವಯಾಡಕ್ಟ್‌ಗಳನ್ನು (ಎತ್ತರದ ರೈಲು ಮೇಲ್ಸೇತುವೆ) ನಿರ್ಮಿಸಲು ಉದ್ದೇಶಿಸಲಾಗಿದೆ. ಪಶ್ಚಿಮ ಘಟ್ಟಗಳ ಮೂಲಕ ಹಾದುಹೋಗುವ ಈ ದ್ವಿಪಥ ರೈಲು ಮಾರ್ಗದಲ್ಲಿ ಅರಣ್ಯ ಭೂಮಿಯ ಬಳಕೆ ಹಾಗೂ ಪರಿಸರ ಮತ್ತು ವನ್ಯಜೀವಿಗಳ ಮೇಲಿನ ಪರಿಣಾಮವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ರೈಲು ಮಾರ್ಗದ ಒಟ್ಟು ಉದ್ದ 164 ಕಿ.ಮೀ. ಆಗಿರಲಿದೆ. ಈ ಹಿಂದಿನ ಪ್ರಸ್ತಾವನೆಯಲ್ಲಿ ಸುರಂಗಗಳು ಮತ್ತು ವಯಾಡಕ್ಟ್‌ಗಳ ಸಂಖ್ಯೆ ಹಾಗೂ ಉದ್ದ ಕಡಿಮೆ ಇದ್ದವು. 

ಈ ರೈಲು ಮಾರ್ಗ ಕಾರ್ಯರೂಪಕ್ಕೆ ಬಂದಲ್ಲಿ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಮಹತ್ವದ ಉತ್ತೇಜನ ದೊರೆಯುವ ನಿರೀಕ್ಷೆಯಿದೆ. ಬಂದರು ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸುವುದರ ಜತೆಗೆ, ಕಬ್ಬಿಣದ ಅದಿರು, ಕಲ್ಲಿದ್ದಲು, ರಸಗೊಬ್ಬರ, ಮರ ಹಾಗೂ ಆಹಾರ ಧಾನ್ಯಗಳಂತಹ ಬೃಹತ್ ಪ್ರಮಾಣದ ಸರಕು ಸಾಗಣೆಗೆ ರೈಲು ಸಾರಿಗೆ ಅನುಕೂಲವಾಗಲಿದೆ. ಇದರಿಂದ ಆಮದು ಮತ್ತು ರಫ್ತು ವಹಿವಾಟಿನಲ್ಲಿ ಸಾಗಣೆ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೂ ಈ ರೈಲು ಮಾರ್ಗ ಅನುಕೂಲ ಕಲ್ಪಿಸಲಿದೆ. 

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ರೈಲು ನಿಲ್ದಾಣ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ರೈಲು ನಿಲ್ದಾಣ

ದಕ್ಷಿಣ ಪಶ್ಚಿಮ ರೈಲ್ವೆಯ ಮೂಲಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಸುಮಾರು ಶೇ.80ರಷ್ಟು ಪ್ರದೇಶ ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಹೀಗಾಗಿ, ಕರಾವಳಿ ಮತ್ತು ಒಳನಾಡು ಪ್ರದೇಶಗಳನ್ನು ಸಂಪರ್ಕಿಸುವ ಈ ರೈಲು ಮಾರ್ಗ ಅನಿವಾರ್ಯವಾಗಿ ಅರಣ್ಯ ಪ್ರದೇಶದ ಮೂಲಕ ಹಾದುಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯ ಅವಶ್ಯಕತೆಯನ್ನು ಕಡಿಮೆಗೊಳಿಸಲು ಸುರಂಗಗಳ ಹಾಗೂ ವಯಾಡಕ್ಟ್‌ಗಳ ಉದ್ದವನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಪರಿಷ್ಕೃತ ಯೋಜನೆಯ ಅಂದಾಜು ವೆಚ್ಚ 16,436 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಹಿಂದೆ ಪ್ರಸ್ತಾಪಿಸಲಾಗಿದ್ದ ಯೋಜನೆಯ ಅಂದಾಜು ವೆಚ್ಚ 2,315 ಕೋಟಿ ರೂ.ಗಳಾಗಿತ್ತು. ಸಿಂಗಲ್ ಟ್ರ್ಯಾಕ್ (ಮಾರ್ಪಡಿಸಿದ ಬ್ರಾಡ್ ಗೇಜ್ ಲೋಡಿಂಗ್ - 1987) ಬದಲಿಗೆ 25 ಟನ್ ಆಕ್ಸಲ್ ಲೋಡಿಂಗ್ ಸಾಮರ್ಥ್ಯದ ಬ್ರಾಡ್‌ಗೇಜ್ ದ್ವಿಪಥ ಮಾರ್ಗವಾಗಿ ಯೋಜನೆಯನ್ನು ಪರಿಷ್ಕರಿಸಿರುವುದು ವೆಚ್ಚ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ವಯಾಡಕ್ಟ್‌ಗಳನ್ನು ವನ್ಯಜೀವಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. 

ಯೋಜನೆಯ ಪ್ರಗತಿ ಕುರಿತು ಕೋಸ್ಟಲ್ ಟಾಕ್ ನ್ಯೂಸ್‌ಗೆ ಮಾಹಿತಿ ನೀಡಿದ ದಕ್ಷಿಣ ಪಶ್ಚಿಮ ರೈಲ್ವೆಯ ಮೂಲಗಳು, ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ (WII) ತನ್ನ ಕ್ಷೇತ್ರ ಅಧ್ಯಯನ ಹಾಗೂ ಸಮಗ್ರ ಪರಿಣಾಮಗಳ ಮೌಲ್ಯಮಾಪನವನ್ನು ಪೂರ್ಣಗೊಳಿಸಿದೆ. ಪರಿಸರ ಮತ್ತು ವನ್ಯಜೀವಿಗಳ ಮೇಲಿನ ಪರಿಣಾಮ ತಗ್ಗಿಸುವ ಕ್ರಮಗಳ ಸಿದ್ಧತೆ ಪ್ರಗತಿಯಲ್ಲಿದೆ. ಪರಿಷ್ಕೃತ ಮಾರ್ಗಕ್ಕೆ ಸಂಬಂಧಿಸಿದಂತೆ ಹೊಸದಾಗಿ ಅರಣ್ಯ ಭೂಮಿ ಮಂಜೂರಾತಿ ಪ್ರಸ್ತಾವನೆಯೂ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿವೆ. 

ಉತ್ತರ ಕನ್ನಡ ರೈಲ್ವೆ ಸೇವಾ ಸಮಿತಿಯ ಕಾರ್ಯದರ್ಶಿ ರಾಜೀವ್ ಗಾಂವ್ಕರ್ ಪ್ರತಿಕ್ರಿಯಿಸಿ "ಆರಂಭದಲ್ಲೇ ದ್ವಿಪಥ ರೈಲು ಮಾರ್ಗವನ್ನು ಕೈಗೆತ್ತಿಕೊಳ್ಳುತ್ತಿರುವುದು ಉತ್ತಮ ನಿರ್ಧಾರ. ಮುಂದೆ ಮತ್ತೊಂದು ಹಳಿಯನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ಇದರಿಂದ ತಪ್ಪಿಸುವಂತಾಗಿದೆ " ಎಂದು ತಿಳಿಸಿದರು.