ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ

ಮಣಿಪಾಲದ ಮಾಂಡವಿ ಎಮರಾಲ್ಡ್ ಅಪಾರ್ಟ್‌ಮೆಂಟ್ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರ ಮೇಲೆ ಪಟಾಕಿ ಎಸೆದು ಉಪಟಳ ನೀಡಿದ ಆರೋಪದ ಮೇರೆಗೆ 20 ಮಂದಿಯ ವಿರುದ್ಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನವೆಂಬರ್ 8ರಂದು ರಾತ್ರಿ ಸುಮಾರು 11 ಗಂಟೆಗೆ 20 ಮಂದಿ ಗುಂಪುಗೂಡಿ ಸಾರ್ವಜನಿಕ ರಸ್ತೆಯಲ್ಲಿ ಬೇಜವಾಬ್ದಾರಿಯಿಂದ ಪಟಾಕಿ ಸಿಡಿಸುತ್ತಿದ್ದರು. ಅಲ್ಲದೆ, ಕೈಯಲ್ಲಿ ಉರಿಯುತ್ತಿದ್ದ ಪಟಾಕಿಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ವಾಹನಗಳ ಮೇಲೆ ಎಸೆಯುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಅನಿಲ್, ಕೀರ್ತಿ, ಡೆನಿಸ್, ರವಿಶೆಟ್ಟಿ ಹಾಗೂ ಜ್ಞಾನೇಶ್ವರ್ ಎಂಬವರು ತೊಂದರೆಗೊಳಗಾಗಿದ್ದು, ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸರ ಸೂಚನೆಗಳನ್ನು ನಿರ್ಲಕ್ಷಿಸಿ ಅವರ ಮೇಲೂ ಪಟಾಕಿ ಎಸೆದು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಆರ್ಯನ್ ಕುಮಾರ್, ಆದಿತ್ಯ ಪ್ರಜಾಪತಿ, ಪ್ರಿಯಾಂಶ್, ಸಿದ್ದಾಂತ್ ಸಿಂಗ್, ಪ್ರಿಯಜಿತ್ ಸಿಂಗ್ ಸೇರಿದಂತೆ ಇತರ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 224, 292 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.