ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು 

“ಐತಿಹಾಸಿಕ ಮಹಿಳಾ ಮೀಸಲು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನ ಅಂಗೀಕಾರವಾಗುವ ನಿರೀಕ್ಷಿಯಲ್ಲಿದ್ದೇವೆ”ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತೀಯ ಪ್ರಾದೇಶಿಕ ವಿಭಾಗದ ಮೊದಲ ಸಮ್ಮೇಳನವನ್ನು ಶಿವಕುಮಾರ್ ಅವರು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. 

“ಡಿಸೆಂಬರ್ ನ ಅಧಿವೇಶನ ಇತಿಹಾಸ ನಿರ್ಮಿಸಲಿದೆ. ಈ ಮೀಸಲಾತಿಯಿಂದಾಗಿ ನಾವು ಎಷ್ಟು ಜನರು ಸಂಸತ್ ಹಾಗೂ ವಿಧಾನಸೌಧದಿಂದ ಹೊರಬರಬೇಕಾಗುವುದೋ, ತಿಳಿಯದು. ಆದರೆ ಶೇ. 50 ರಷ್ಟು ಹೆಚ್ಚುವರಿ ಕ್ಷೇತ್ರಗಳಿರುವುದು ಎಂದು ಹೇಳಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಮೀಸಲಾತಿ ಬರುವುದು ಎಂದು ತಿಳಿದಿಲ್ಲ” ಎಂದು ಹೇಳಿದರು. 

“ಮಹಿಳಾ ಮೀಸಲಾತಿಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮಹಿಳೆಯರ ಬೆಂಬಲವಿಲ್ಲದೆ ಪುರುಷರು ಯಶಸ್ವಿಯಾಗಲು ಸಾಧ್ಯವಿಲ್ಲ. ಇದು ನಮ್ಮ ಪ್ರಗತಿ ಪರ ಸಮಾಜದ ತಳಪಾಯವೂ ಹೌದು’’ ಎಂದು ಅಭಿಪ್ರಾಯಪಟ್ಟರು. “ಅನುಭವ ಮಂಟಪ ಸಂಸದೀಯ ವ್ಯವಸ್ಥೆಯನ್ನು 12 ನೇ ಶತಮಾನದಲ್ಲಿಯೇ ಪರಿಚಯಿಸಿದೆ. ವಿಧಾನಸೌಧದ ಪ್ರವೇಶದ್ವಾರದಲ್ಲಿ ಮಹಿಳೆಯರಿಗೆ ನಮ್ಮ ರಾಜ್ಯ ನೀಡಿರುವ ಪ್ರಾಮುಖ್ಯತೆಯನ್ನು ತೋರಿಸುವ ಚಿತ್ರವಿದೆ. ಇದನ್ನು ನೀವು ತಪ್ಪದೇ ವೀಕ್ಷಿಸಿ” ಎಂದು ತಿಳಿಸಿದರು. 

“ನಮ್ಮಲ್ಲಿ ಶೇ. 42ರಷ್ಟು ವೈದ್ಯರು ಮಹಿಳೆಯರು, ಶೇ. 80ರಷ್ಟು ಅರೆ ವೈದ್ಯಕೀಯ ಸಿಬ್ಬಂದಿ ಮಹಿಳೆಯರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶೇ.40ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದೆವು. ಐದರಲ್ಲಿ ನಾಲ್ಕು ಗ್ಯಾರಂಟಿಗಳು ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳಾಗಿವೆ”ಎಂದು ಸಿಎಂ ತಿಳಿಸಿದರು. 

“ಮಹಿಳೆಯರು ರಾಜಕಾರಣ ಪ್ರವೇಶಿಸುವುದು ಸುಲಭವಲ್ಲ. ಸಾಮಾಜಿಕವಾಗಿ, ಕೌಟುಂಬಿಕವಾಗಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನೀವು ಮಹಿಳಾ ರಾಜಕಾರಣಿಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಬೇಕು. ತಳಹಂತದ ಪ್ರಜಾಪ್ರಭುತ್ವದಲ್ಲಿ ಲಕ್ಷಾಂತರ ಮಹಿಳೆಯರು ಸಾರ್ವಜನಿಕ ಬದುಕಿಗೆ ಪ್ರವೇಶಿಸುತ್ತಾರೆ. ಪಂಚಾಯಿತಿಯಿಂದ ಸಂಸತ್ತಿನ ವರೆಗೆ ಮಹಿಳೆಯರು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು”ಎಂದು ಕರೆ ನೀಡಿದರು.