ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು 

ಸಂಚಾರಕ್ಕೆ ನೆರವು ನೀಡುವ ಪ್ಲಾಟ್‌ಫಾರ್ಮ್ 'ಓಲಾ' ಅನ್ನು ನಿರ್ವಹಿಸುವ 'ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆಯು, ಗ್ರಾಹಕರು ತಮ್ಮ ಪ್ರಯಾಣ ಪೂರ್ಣಗೊಳಿಸುವ ಮೊದಲೇ 'ಟಿಪ್' (tip-ಭಕ್ಷಿಸು) ಅಥವಾ 'ಆಡ್-ಆನ್' (add-on) ಎಂಬ ವೈಶಿಷ್ಟ್ಯದ ಮೂಲಕ ಹೆಚ್ಚುವರಿ ಹಣ ಪಾವತಿಗೆ ಉತ್ತೇಜನ ನೀಡುತ್ತಿರುವುದಕ್ಕಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ಪದ್ಧತಿಯು ಗ್ರಾಹಕರನ್ನು ದಾರಿತಪ್ಪಿಸುತ್ತದೆ, ಇದು ಒಂದು ಅನೈತಿಕ ವ್ಯಾಪಾರ ಪದ್ಧತಿಯಾಗಿದೆ ಮತ್ತು ಇದರಲ್ಲಿ 'ಡಾರ್ಕ್ ಪ್ಯಾಟರ್ನ್' (ಗ್ರಾಹಕರನ್ನು ತಪ್ಪು ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸುವ ವಿನ್ಯಾಸ) ಬಳಸಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಾಧಿಕಾರವು, ಕೂಡಲೇ ಈ ಪದ್ಧತಿಯನ್ನು ಸ್ಥಗಿತಗೊಳಿಸುವಂತೆ ಓಲಾಗೆ ನಿರ್ದೇಶನ ನೀಡಿದೆ. 

ಮುಖ್ಯ ಆಯುಕ್ತರಾದ ನಿಧಿ ಖರೆ ಮತ್ತು ಆಯುಕ್ತರಾದ ಅನುಪಮ್ ಮಿಶ್ರಾ ಅವರ ನೇತೃತ್ವದ ಸಿಸಿಪಿಎ ಈ ಆದೇಶವನ್ನು ಹೊರಡಿಸಿದೆ. ಆ್ಯಪ್‌ನಲ್ಲಿ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿರುವಾಗ, ಹೆಚ್ಚುವರಿ ಹಣ ಪಾವತಿಸಿದರೆ ರೈಡ್ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬಂತೆ ಬಿಂಬಿಸುವ ವೈಶಿಷ್ಟ್ಯವನ್ನು ಪರಿಶೀಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಓಲಾ ಸಂಸ್ಥೆಯು ನಂತರ 'ಟಿಪ್'  ಎಂಬುದನ್ನು 'ಆಡ್-ಆನ್' ಎಂದು ಮರುನಾಮಕರಣ ಮಾಡಿದರೂ, ಅದರ ಹಿಂದಿನ ಮೂಲ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. 

ಸಿಸಿಪಿಎಯು ಓಲಾ ಆ್ಯಪ್‌ನ ವಿವಿಧ ಆವೃತ್ತಿಗಳನ್ನು ಪರಿಶೀಲಿಸಿದಾಗ, "ಟಿಪ್ ನೀಡಿದರೆ ರೈಡ್ ಬೇಗ ಸಿಗುವ ಸಾಧ್ಯತೆ ಹೆಚ್ಚಾಗಬಹುದು", "ಬೇಗನೆ ರೈಡ್ ಪಡೆಯಲು ಈಗಲೇ ಟಿಪ್ ನೀಡಿ" ಮತ್ತು "ರೈಡ್ ಬೇಗ ಖಚಿತಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಿ!" ಎಂಬಂತಹ ಸಂದೇಶಗಳು ಕಂಡುಬಂದವು. ಇವು, ಹೆಚ್ಚುವರಿ ಹಣ ಪಾವತಿಸಿದರೆ ಗ್ರಾಹಕರಿಗೆ ಬೇಗನೆ ರೈಡ್ ಸಿಗುತ್ತದೆ ಎಂಬ ಭಾವನೆಯನ್ನು ಮೂಡಿಸುತ್ತವೆ. 

ಇದೇ ಪದ್ಧತಿ ಸಂಬಂಧ ಸಿಸಿಪಿಎ ಇತರ ಕ್ಯಾಬ್ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡಿದೆ. ರಾಪಿಡೊ ವಿರುದ್ಧವು 10 ಲಕ್ಷ ರೂ. ದಂಡ ವಿಧಿಸುವ ಆದೇಶವನ್ನು ಸಿಸಿಪಿಎ ಹೊರಡಿಸಿದೆ. ಉಬರ್ ಮತ್ತು ನಮ್ಮ ಯಾತ್ರಿ ವಿರುದ್ಧದ ಪ್ರಕ್ರಿಯೆಗಳು ಸದ್ಯ ತನಿಖೆ ಪ್ರಗತಿಯಲ್ಲಿದೆ.