ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ದೀಪಾವಳಿಯ ಸಂದರ್ಭದಲ್ಲಿ ಮಹಿಳೆಯ ಬದುಕಿಗೆ ಹೊಸ ಆಶಾಕಿರಣ ಮೂಡಿದೆ. ಆರು ವರ್ಷಗಳ ಕನಸಿಗೆ ಇದೀಗ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಆಸರೆಯಾಗಿದ್ದಾರೆ. ಒಂಟಿ ಅವಿವಾಹಿತ ಮಹಿಳೆಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೂ. 5 ಲಕ್ಷ ಮೀರದಂತೆ ಮನೆ ನಿರ್ಮಿಸಿ ಕೊಡುವ ಸಂಕಲ್ಪ ಮಾಡಿ ಮಹಿಳೆಯ ಮುಖದಲ್ಲಿ ದೀಪಾವಳಿಯ ಸಂತಸ ಮೂಡಿಸಿದ್ದಾರೆ.
ಸುಮಾರು 35 ವರ್ಷದ ದಲಿತ ಮಹಿಳೆ ಮೂಲತಃ ಅಂಬಲಪಾಡಿಯವರಾಗಿದ್ದು ಮಹಿಳೆಯ ತಂದೆ ತಾಯಿ ಮೃತ ಪಟ್ಟಿದ್ದು ನೆಲೆಸಿದ್ದ ಗುಡಿಸಲು ನೆಲಸಮವಾಗಿತ್ತು. ಮಹಿಳೆ ಅಸಹಾಯಕಳಾಗಿ ದೂರದ ಸಣ್ಣ ಬಾಡಿಗೆ ಸೂರೊಂದರಲ್ಲಿ ನೆಲೆಕಂಡಿದ್ದರು. ಮಹಿಳೆಯ ತಿಂಗಳ ರೂ. 5,000 ದುಡಿಮೆಯಲ್ಲಿ ದಿನ ಖರ್ಚು ಹಾಗೂ ಬಾಡಿಗೆ ನೀಡಿ ಬಹಳ ಕಷ್ಟದಲ್ಲಿ ದಿನದೂಡುತ್ತಿದ್ದರು. ಮನೆ ನಿರ್ಮಾಣಕ್ಕಾಗಿ ಕಳೆದ ಆರು ವರ್ಷಗಳಿಂದ ಹೋರಾಟ ನಡೆಸಿ ಕೈ ಚೆಲ್ಲಿದ್ದು ಇದೀಗ ವಿಶು ಶೆಟ್ಟಿಯವರು ಸ್ಪಂದಿಸಿದ್ದಾರೆ.
ವಿಶು ಶೆಟ್ಟಿ ರೂ.50,000/- ಸಹಾಯ ಮನೆ ನಿರ್ಮಾಣಕ್ಕೆ ನೀಡಿದ್ದು, ಮಹಿಳೆ ತನ್ನಿಂದ ಹಣ ಒಟ್ಟುಗೂಡಿಸಿ ಕಟ್ಟಲು ಸಾಧ್ಯವಿಲ್ಲ ಎಂದು ಭಿನ್ನವಿಸಿದಾಗ ಸಹೋದರನ ಸ್ಥಾನದಲ್ಲಿ ನಿಂತು ಮನೆ ನಿರ್ಮಾಣದ ಜವಾಬ್ದಾರಿ ವಿಶು ಶೆಟ್ಟಿ ವಹಿಸಿದ್ದಾರೆ. ಸಾಮಗ್ರಿ ರೂಪದಲ್ಲಿ ದಾನಿಗಳು ಸಹಕರಿಸುವಂತೆ ವಿಶು ಶೆಟ್ಟಿ ಮಹಿಳೆಯ ಪರವಾಗಿ ವಿನಂತಿಸಿದ್ದಾರೆ. ಜಾಗದ ಯಜಮಾನರು ಅಂಬಲಪಾಡಿ ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ ಒಪ್ಪಿಗೆ ನೀಡಿದ್ದು ಆದಷ್ಟು ಬೇಗ ಮನೆ ನಿರ್ಮಾಣ ಆಗಲು ದಾನಿಗಳು ಸಹಕರಿಸುವಂತಾಗಲಿ ಎಂದು ಹಾರೈಸಿದ್ದಾರೆ.
ಮಹಿಳೆಯ ಬಗ್ಗೆ ಸಮಾಜದಲ್ಲಿ ಉತ್ತಮ ಭಾವನೆಯಿದ್ದು ಬೇರೆ ವಿಧಿಯಿಲ್ಲದೇ ದೂರದ ಬಾಡಿಗೆ ಮನೆಗೆ ತೆರಳಿದ್ದು ಮಹಿಳೆಯ ಭವಿಷ್ಯ ಹಾಗೂ ವಿಶೇಷವಾಗಿ ಸುರಕ್ಷತೆಯ ದೃಷ್ಟಿಯಿಂದ ಮನೆ ನಿರ್ಮಾಣ ಮಾಡಿಕೊಡುವುದು ಅತ್ಯಾವಶ್ಯಕತೆಯಾಗಿದೆ ಎಂದು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.