ಕೋಸ್ಟಲ್ ಟಾಕ್ ನ್ಯೂಸ್ | ಬೆಂಗಳೂರು
“ಪ್ರತಿಯೊಂದು ಮಗುವಿನಲ್ಲೂ ನಾಯಕತ್ವದ ಗುಣಗಳಿರುತ್ತವೆ. ಪ್ರತಿಯೊಂದು ಮಗುವೂ ಉನ್ನತ ಮಟ್ಟಕ್ಕೆ ಬೆಳೆಯಲು ನೆರವಾಗುವ ಶಕ್ತಿ ಶಿಕ್ಷಕರಿಗಿದೆ. ಶಾಸಕರು ಮತ್ತು ಸಚಿವರ ಮಕ್ಕಳೇ ನಾಯಕರಾಗಬೇಕು ಎಂದೇನಿಲ್ಲ; ಸಾಮಾನ್ಯ ನಾಗರಿಕರ ಮಕ್ಕಳೂ ನಾಯಕರಾಗಿ ಬೆಳೆಯಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ನಡೆದ ‘ಶೈಕ್ಷಣಿಕ ಸಾರಥ್ಯ’ ಸಮಾರಂಭವನ್ನು ಉದ್ಘಾಟಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನೂತನ ಪ್ರಾಂಶುಪಾಲರಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶಗಳನ್ನು ವಿತರಿಸಿ ಅವರು ಮಾತನಾಡಿದರು. “ವಿದ್ಯಾರ್ಥಿ ಸಮುದಾಯ ಮತ್ತು ಸಮಾಜವು ನೂತನ ಪ್ರಾಂಶುಪಾಲರ ಮೇಲೆ ವಿಶ್ವಾಸವಿಟ್ಟಿದೆ. ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಾಗ ನನಗೆ ಸಚಿವ ಅಥವಾ ಮುಖ್ಯಮಂತ್ರಿಯಾದಾಗ ಉಂಟಾದ ಸಂತೋಷಕ್ಕಿಂತ ಹೆಚ್ಚಿನ ಸಂತೋಷವಾಗಿತ್ತು. ಶಿಕ್ಷಣವು ಆತ್ಮವಿಶ್ವಾಸವನ್ನು ಬೆಳೆಸುತ್ತದೆ” ಎಂದರು.
“ಒಂದು ಪುಸ್ತಕ, ಒಂದು ಪೆನ್ನು ಮತ್ತು ಒಬ್ಬ ಶಿಕ್ಷಕರು ಇಡೀ ದೇಶದ ಭವಿಷ್ಯವನ್ನೇ ಬದಲಿಸಬಲ್ಲರು. ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ನಿಮ್ಮ ಮೇಲೆ ನಮಗೆ ವಿಶ್ವಾಸವಿದೆ. ವೈಯಕ್ತಿಕ ಲಾಭಕ್ಕಾಗಿ ಮಾತ್ರ ಶಿಕ್ಷಣ ನೀಡದೆ, ಉತ್ತಮ ಸಮಾಜ ನಿರ್ಮಿಸುವ ಉದ್ದೇಶದಿಂದ ಶಿಕ್ಷಣ ನೀಡಬೇಕು” ಎಂದು ಹೇಳಿದರು.