ಕೋಸ್ಟಲ್ ಟಾಕ್ ನ್ಯೂಸ್ | ಕಾರವಾರ 

700 ಗ್ರಾಂ ತೂಕದ ₹1.30 ಲಕ್ಷ ಮೌಲ್ಯದ ಬೆಳ್ಳಿ ಕಾಲ್ಗೆಜ್ಜೆಗಳನ್ನು ಕಳವು ಮಾಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಉತ್ತರ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 17, 2026ರಂದು ಮುಂಡಗೋಡ ಪಟ್ಟಣದ ಆಭರಣ ಮಳಿಗೆಯೊಂದರಲ್ಲಿ ನಾಲ್ಕು ಜೊತೆ ಬೆಳ್ಳಿ ಕಾಲ್ಗೆಜ್ಜೆಗಳನ್ನು ಕಳವು ಮಾಡಲಾಗಿತ್ತು. ಬಂಧಿತರನ್ನು ಬೆಳಗಾವಿ ಜಿಲ್ಲೆಯ ಬಾಲೇಕುಂದ್ರಿ ನಿವಾಸಿಗಳಾದ ಶಾಂತಾ ಮೂರ್ತಿ ಅಂಗಡಿ ಮತ್ತು ಶಾಂತಾ ಮದನ ಪೂಜಾರಿ ಎಂದು ಗುರುತಿಸಲಾಗಿದೆ. 

ಅಕ್ಟೋಬರ್ 17ರಂದು ಮಧ್ಯಾಹ್ನ 3.45ರಿಂದ 4.15ರ ಅವಧಿಯಲ್ಲಿ ಆರೋಪಿಗಳು  ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮಿ ಜ್ಯುವೆಲ್ಲರ್ಸ್‌ಗೆ ತೆರಳಿ ನಾಲ್ಕು ಜೊತೆ ಬೆಳ್ಳಿ ಕಾಲ್ಗೆಜ್ಜೆಗಳನ್ನು ಕಳವು ಮಾಡಿದ್ದರು ಎನ್ನಲಾಗಿದೆ. ಈ ಕುರಿತು ದೂರು ದಾಖಲಾದ ಬಳಿಕ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 305ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕಳವು ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿ, ಅವರ ಬಳಿಯಿದ್ದ ಕಳವು ಮಾಡಿದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್. ಅಭಿನಂದಿಸಿದ್ದಾರೆ.