ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, 2026ರ ಮುಂಗಾರು ಅಧಿವೇಶನದಲ್ಲಿ ಕರಾವಳಿ ಕರ್ನಾಟಕದ ಮೂವರು ಲೋಕಸಭಾ ಸದಸ್ಯರ ಹಾಜರಾತಿ ದಾಖಲೆ ಕಡೆಗೆ ಗಮನಹರಿಸಿದಾಗ ಈ ಮಾಹಿತಿ ಲಭ್ಯವಾಗುತ್ತದೆ. ಮೂವರ ಪೈಕಿ ಒಬ್ಬರು ಎಲ್ಲ ಕಲಾಪಗಳಿಗೂ ಹಾಜರಾಗಿದ್ದರೆ, ಉಳಿದ ಇಬ್ಬರು ಲೋಕಸಭಾ ಸದಸ್ಯರ ಹಾಜರಾತಿಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡುಬಂದಿದೆ.
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನದ ಎಲ್ಲ 19 ಕಲಾಪಗಳಿಗೂ ಹಾಜರಾಗಿ ಶೇ. 100ರಷ್ಟು ಹಾಜರಾತಿ ದಾಖಲಿಸಿದ್ದಾರೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು 19 ಕಲಾಪಗಳ ಪೈಕಿ 18ಕ್ಕೆ ಹಾಜರಾಗಿದ್ದು, ಒಂದು ದಿನ ಗೈರಾಗಿದ್ದರು. ಅವರ ಹಾಜರಾತಿ ಪ್ರಮಾಣ ಶೇ. 94.74ರಷ್ಟಿದೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು 19 ಕಲಾಪಗಳ ಪೈಕಿ 17ಕ್ಕೆ ಹಾಜರಾಗಿದ್ದು, ಜುಲೈ 24 ಮತ್ತು ಆಗಸ್ಟ್ 13ರಂದು ಗೈರಾಗಿದ್ದರು. ಅವರ ಹಾಜರಾತಿ ಪ್ರಮಾಣ ಶೇ. 89.47ರಷ್ಟಿದೆ.
18ನೇ ಲೋಕಸಭೆಯ ಮುಂಗಾರು ಅಧಿವೇಶನ ಜುಲೈ 20ರಂದು ಆರಂಭವಾಗಿ ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. 25 ದಿನಗಳ ಅವಧಿಯಲ್ಲಿ ಒಟ್ಟು 19 ಕಲಾಪಗಳು ನಡೆದಿದ್ದವು. ಈ ಅಂಕಿಅಂಶಗಳು ಅಧಿವೇಶನದ ವೇಳೆ ಸಂಸದರು ಸದನದಲ್ಲಿ ಹಾಜರಿದ್ದ ದಿನಗಳ ವಿವರವನ್ನು ನೀಡುತ್ತವೆ.
ಮುಂದಿನ ಅಧಿವೇಶನ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಹಾಜರಾತಿಯ ಜೊತೆಗೆ ಪ್ರಶ್ನೆಗಳು, ಚರ್ಚೆಗಳು ಮತ್ತು ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ತಮ್ಮ ಸಂಸದರು ಪ್ರಸ್ತಾಪಿಸ ಬೇಕೆಂದು ಮತ ನೀಡಿದ ಜನರು ಅಪೇಕ್ಷೆಪಡುತ್ತಾರೆ.