ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ

ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮಲ್ಪೆ ಬೀಚ್ ಮತ್ತು ಸೀ ವಾಕ್‌ವೇ ಪಾಯಿಂಟ್‌ನಲ್ಲಿ ಕಸದ ರಾಶಿ ಹಾಗೂ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಪ್ರವಾಸಿಗರನ್ನು ಆಕರ್ಷಿಸಬೇಕಾದ ಈ ತಾಣಗಳು ಸ್ವಚ್ಛತೆ ಮತ್ತು ಸುರಕ್ಷತೆಯ ಕೊರತೆಯಿಂದಾಗಿ ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿವೆಯೇ ಎಂಬ ಪ್ರಶ್ನೆ ಮೂಡಿದೆ.

ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವುದರಲ್ಲಿ ಆಸಕ್ತಿ ತೋರುತ್ತಿರುವ ಪ್ರವಾಸೋದ್ಯಮ ಇಲಾಖೆ, ಪ್ರವಾಸಿ ತಾಣಗಳ ಮೂಲಭೂತ ನಿರ್ವಹಣೆಯತ್ತ ಮಾತ್ರ ನಿರೀಕ್ಷಿತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೀಚ್‌ನ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮತ್ತು ಪ್ರವಾಸಿಗರ ಸುರಕ್ಷತೆಯ ಹೊಣೆ ಹೊತ್ತಿರುವ ಇಲಾಖೆಗಳು ಹಾಗೂ ನಿರ್ವಹಣಾ ಸಂಸ್ಥೆಗಳ ಜವಾಬ್ದಾರಿಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ಇತ್ತ ಸ್ಥಳೀಯರಿಂದಲೂ ಈ ಅವ್ಯವಸ್ಥೆಯ ವಿರುದ್ಧ ಪರಿಣಾಮಕಾರಿ ಪ್ರತಿರೋಧ ವ್ಯಕ್ತವಾಗುತ್ತಿಲ್ಲ.

ಬೀಚ್ ಪ್ರದೇಶದಲ್ಲಿ ಗುಂಪುಗುಂಪಾಗಿ ಓಡಾಡುವ ಬೀದಿನಾಯಿಗಳು ಪ್ರವಾಸಿಗರಲ್ಲಿ ಆತಂಕ ಮೂಡಿಸಿವೆ. ಯಾವ ಕ್ಷಣದಲ್ಲಿ ನಾಯಿಗಳು ದಾಳಿ ಮಾಡಬಹುದೆಂಬ ಭಯದಿಂದ ಮುಕ್ತವಾಗಿ ಓಡಾಡಲೂ ಸಾಧ್ಯವಾಗುತ್ತಿಲ್ಲ ಎಂದು ಪ್ರವಾಸಿಗರು ದೂರಿದ್ದಾರೆ.

ಇದರ ನಡುವೆ, ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ತ್ಯಾಜ್ಯ ಹಾಗೂ ಕೊಳೆತ ಕಸದಿಂದ ಹೊರಹೊಮ್ಮುವ ವಾಸನೆ ಬೀಚ್‌ನ ಸೌಂದರ್ಯವನ್ನೇ ಹಾಳುಗೆಡವಿದೆ.

ಬೆಂಗಳೂರಿನ ಪ್ರವಾಸಿಗ ಚಂದ್ರಕಾಂತ್ ಮಾತನಾಡಿ, ಮಲ್ಪೆ ಬೀಚ್ ಮತ್ತು ಸೀ ವಾಕ್‌ವೇ ಪಾಯಿಂಟ್‌ಗೆ ಭೇಟಿ ನೀಡಿದಾಗ ಕಂಡ ಕಸದ ರಾಶಿ ಹಾಗೂ ಬೀದಿನಾಯಿಗಳ ಬೆನ್ನಟ್ಟುವಿಕೆಯಿಂದ ಬೇಸರವಾಯಿತು ಎಂದು ಹೇಳಿದರು. ಇನ್ನೊಮ್ಮೆ ಈ ಬೀಚ್ ಕಡೆಗೆ ಬರಲು ಯೋಚಿಸಿವಂತಾಗಿದೆ ಎಂದು ಅವರು ಹೇಳಿದರು.

"ಈ ಸಮಸ್ಯೆಗಳನ್ನು ನಿಯಂತ್ರಿಸಲು ಉಡುಪಿ ಆಡಳಿತಕ್ಕೆ ಸಾಧ್ಯವಾಗದಿದ್ದರೆ, ಪ್ರವಾಸಿಗರನ್ನು ಇಲ್ಲಿಗೆ ಆಹ್ವಾನಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಯಾವುದೇ ನೈತಿಕತೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಮಾತನಾಡುವ ಆಡಳಿತ, ಮೊದಲು ಪ್ರವಾಸಿ ತಾಣಗಳ ಸ್ವಚ್ಛತೆ ಹಾಗೂ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಬೇಕಿದೆ. ಇಲ್ಲವಾದರೆ ಮಲ್ಪೆಯ ಪ್ರವಾಸೋದ್ಯಮ ಅವ್ಯವಸ್ಥೆಯ ಪಾಲಾಗುವ ಅಪಾಯವಿದೆ.