ಕೋಸ್ಟಲ್ ಟಾಕ್ ನ್ಯೂಸ್ | ಮಣಿಪಾಲ
ನವೆಂಬರ್ 8ರಂದು ದೀಪಾವಳಿ ಆಚರಣೆಯ ವೇಳೆ ನಡೆದ ಘಟನೆಯ ಬಳಿಕ ಮಣಿಪಾಲ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯದ ಮಾಡಿದ್ದಾರೆ ಎಂಬ ಆರೋಪದ ಕುರಿತು ಉಡುಪಿ ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಗುರುವಾರ ತಿಳಿಸಿದ್ದಾರೆ.
ನವೆಂಬರ್ 8ರ ರಾತ್ರಿ ಮಣಿಪಾಲದ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸಿ, ವಾಹನಗಳು ಮತ್ತು ಪಾದಚಾರಿಗಳ ಮೇಲೆ ಪಟಾಕಿಗಳನ್ನು ಎಸೆದು ವಿದ್ಯಾರ್ಥಿಗಳು ಗದ್ದಲ ಸೃಷ್ಟಿಸಿದ್ದರು. ಇದರಿಂದ ರಸ್ತೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಈ ಘಟನೆಯ ಬಳಿಕ ಪೊಲೀಸರು ತಮ್ಮೊಂದಿಗೆ ದೌರ್ಜನ್ಯದಿಂದ ಮಾಡಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿದ್ದರು.
ಈ ಸಂಬಂಧ ವಿದ್ಯಾರ್ಥಿಗಳು ಮೂರು ದಿನಗಳ ಹಿಂದೆ ತನಗೆ ಮನವಿ ಸಲ್ಲಿಸಿದ್ದು, ಅದನ್ನು ವಿಚಾರಣೆಗಾಗಿ ಡಿವೈಎಸ್ಪಿಗೆ ವಹಿಸಲಾಗಿದೆ. ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು. ಪೊಲೀಸ್ ಕ್ರಮದ ಬಗ್ಗೆ ಹರಿರಾಮ್ ಶಂಕರ್ ವಿವರ ನೀಡಿ, ಪ್ರಕರಣದಲ್ಲಿ ದಾಖಲಿಸಲಾದ ಕಲಂಗಳ ಅಡಿಯಲ್ಲಿ ನೇರವಾಗಿ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲದ ಕಾರಣ ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.
ಸ್ಥಳದಲ್ಲಿನ ಸಿಸಿಟಿವಿ ಮತ್ತು ವಿಡಿಯೊ ದೃಶ್ಯಾವಳಿಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದಲ್ಲಿ ಆರೋಪಿತರಿಗೆ ನೋಟಿಸ್ ನೀಡಲಾಗಿದೆ. ತನಿಖಾಧಿಕಾರಿಯಾಗಿ ಪಿಎಸ್ಐ ಮುಂದುವರಿಯುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಅದೇ ದಿನ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ಗೆ ವಹಿಸಲಾಗಿದೆ. ಪ್ರಕರಣದಲ್ಲಿ ಈವರೆಗೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.