ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು

ಮಂಗಳೂರಿನ ಕನಚೂರು ವೈದ್ಯಕೀಯ ಕಾಲೇಜಿನಿಂದ ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿನಿಯನ್ನು ಕೇರಳದಲ್ಲಿರುವ ಆಕೆಯ ಸಂಬಂಧಿಕರ ಮನೆಯಿಂದ ಪೊಲೀಸರು ರಕ್ಷಿಸಿದ್ದಾರೆ.

ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ತಾನು ಕುಟುಂಬದವರ ಬಳಿಗೆ ಮರಳಲು ಇಚ್ಛಿಸುವುದಿಲ್ಲ ಎಂದು ಆಕೆ ತಿಳಿಸಿರುವುದಾಗಿ ಹೇಳಲಾಗಿದೆ. ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ನಂತರ ಆಕೆಯ ಆಯ್ಕೆಯ ಸ್ಥಳಕ್ಕೆ ಅಥವಾ ಪೊಲೀಸ್ ಭದ್ರತೆಯಲ್ಲಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಠಾಣೆಗೆ ಕರೆತರಲಾಗಿರುವ ಇಬ್ಬರು ಆರೋಪಿಗಳಿಗೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅಡಿಯಲ್ಲಿ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಾಪ್ತ ವಯಸ್ಕಳಾಗಿರುವ ವಿದ್ಯಾರ್ಥಿನಿಯನ್ನು ಗುರುವಾರ ಸಂಜೆ ಆಕೆಯ ಕುಟುಂಬದವರು ಕಳುಹಿಸಿದ್ದ ವ್ಯಕ್ತಿಗಳು ಎಳೆದು ಬಲವಂತವಾಗಿ ವಾಹನಕ್ಕೆ ತಳ್ಳಿಕೊಂಡು ಹೋಗಿದ್ದರು. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.