ಕೋಸ್ಟಲ್ ಟಾಕ್ ನ್ಯೂಸ್ | ಮಂಗಳೂರು
ಮಂಗಳೂರಿನ ಕನಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬರನ್ನು ಬಲವಂತವಾಗಿ ವಾಹನದಲ್ಲಿ ಕರೆದೊಯ್ದು ಅಪಹರಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಗುರುವಾರ ಸಂಜೆ ವಿದ್ಯಾರ್ಥಿನಿಯನ್ನು ಎಳೆದು ವಾಹನಕ್ಕೆ ಬಲವಂತವಾಗಿ ತಳ್ಳಿಕೊಂಡು ಹೋಗಲಾಗಿದ್ದು, ಈ ಕೃತ್ಯ ಎಸಗಿದ ವ್ಯಕ್ತಿಗಳನ್ನು ಆಕೆಯ ಕುಟುಂಬದವರೇ ಕಳುಹಿಸಿದ್ದರು ಎನ್ನಲಾಗಿದೆ.
ಪ್ರಾಪ್ತ ವಯಸ್ಕಳಾಗಿರುವ ವಿದ್ಯಾರ್ಥಿನಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕರೆದೊಯ್ಯಲಾಗಿದೆ. ಕೆಲವು ವ್ಯಕ್ತಿಗಳು ಆಕೆಯನ್ನು ಬಲವಂತವಾಗಿ ವಾಹನಕ್ಕೆ ತಳ್ಳುತ್ತಿರುವ ದೃಶ್ಯಾವಳಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಶುಕ್ರವಾರ ಮಾತನಾಡಿ, ವಿದ್ಯಾರ್ಥಿನಿ ಪ್ರಾಪ್ತ ವಯಸ್ಕಳಾಗಿದ್ದು, ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ. ಪ್ರಾಪ್ತ ವಯಸ್ಕಳನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಕರೆದೊಯ್ಯುವುದು, ಎಳೆಯುವುದು, ನಿರ್ಬಂಧಿಸುವುದು ಅಥವಾ ಬಂಧನದಲ್ಲಿಡುವುದು ಅಪರಾಧವಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿನಿ ಹಿಂದೂ ಯುವಕನೊಬ್ಬನೊಂದಿಗೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ.
ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು. ಪೊಲೀಸರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದಾಗ ಮನೆಗೆ ಬೀಗ ಹಾಕಲಾಗಿತ್ತು. ಆಕೆಯನ್ನು ಪತ್ತೆಹಚ್ಚಲು ಪ್ರಯತ್ನಗಳು ಮುಂದುವರಿದಿವೆ.