ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
‘ಉಡುಪಿಗೆ ಬನ್ನಿ’ ಸಂಘಟನೆಯ ನೇತೃತ್ವದಲ್ಲಿ ನವೆಂಬರ್ 15ರಂದು ನಡೆದ ನಾಲ್ಕನೇ ‘ಬರ್ಡ್ ವಾಕ್’ ಪಕ್ಷಿವೀಕ್ಷಣೆ ಕಾರ್ಯಕ್ರಮದಲ್ಲಿ 45 ವಿವಿಧ ಪ್ರಭೇದಗಳಿಗೆ ಸೇರಿದ ಒಟ್ಟು 225 ಪಕ್ಷಿಗಳನ್ನು ದಾಖಲಿಸಲಾಗಿದೆ.
ಬೆಳಿಗ್ಗೆ 6.30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಪರಿಸರಾಸಕ್ತರು ಸುಮಾರು ಒಂದೂವರೆ ಗಂಟೆ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಪಕ್ಷಿವೀಕ್ಷಣೆ ನಡೆಸಿದರು. ಇ-ಬರ್ಡ್ ಮತ್ತು ಮೆರ್ಲಿನ್ ಆ್ಯಪ್ಗಳ ನೆರವಿನಿಂದ 45 ಪ್ರಭೇದಗಳ 225 ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಯಿತು.
ಕಾರ್ಯಕ್ರಮದಲ್ಲಿ ದಾಖಲಾಗಿರುವ ಪಕ್ಷಿಗಳಲ್ಲಿ ಲಿಟಲ್ ರಿಂಗ್ಡ್ ಪ್ಲೋವರ್, ಶಿಕ್ರಾ, ಬ್ರೌನ್ ಶ್ರೈಕ್, ವೈಟ್-ಬ್ರೌಡ್ ಬುಲ್ಬುಲ್, ಬಯಾ ವೀವರ್, ವೈಟ್-ಬ್ರೌಡ್ ವಾಗ್ಟೇಲ್, ಪೇಲ್-ಬಿಲ್ಡ್ ಫ್ಲವರ್ಪೆಕರ್, ಗ್ರೀನಿಷ್ ವಾರ್ಬ್ಲರ್, ಪ್ಲೇನ್ ಪ್ರಿನಿಯಾ, ರಾಕೆಟ್-ಟೈಲ್ಡ್ ಡ್ರೊಂಗೊ, ಬ್ಲ್ಯಾಕ್-ಹುಡೆಡ್ ಓರಿಯೊಲ್, ಸ್ಪಾಟೆಡ್ ಡವ್, ರೆಡ್-ವಾಟಲ್ಡ್ ಲ್ಯಾಪ್ವಿಂಗ್, ಗ್ರೀನ್ ಬೀ-ಈಟರ್, ಬ್ಲೂ-ಟೈಲ್ಡ್ ಬೀ-ಈಟರ್, ಬ್ಲ್ಯಾಕ್-ರಂಪ್ಡ್ ಫ್ಲೇಮ್ಬ್ಯಾಕ್, ರೋಸ್-ರಿಂಗ್ಡ್ ಪ್ಯಾರಕೀಟ್, ರುಫಸ್ ಟ್ರೀಪೈ, ಆ್ಯಶಿ ಪ್ರಿನಿಯಾ ಮತ್ತು ಸ್ಕೇಲಿ-ಬ್ರೆಸ್ಟೆಡ್ ಮುನಿಯಾ ಸೇರಿದಂತೆ ಹಲವು ಪ್ರಭೇದಗಳು ಸೇರಿದ್ದವು.
ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಪ್ರಭಾಕರ್, ಮೇಧಾ ಗಣೇಶ್, ಸವನ್, ಸಾಯಿಶ್ ಮತ್ತಿತರರು ಭಾಗವಹಿಸಿದ್ದರು. ಸೂರ್ಯೋದಯಕ್ಕೂ ಕೆಲವು ನಿಮಿಷಗಳ ಮುನ್ನವೇ ಪಕ್ಷಿಗಳು ಆಹಾರ ಅರಸಲು ಆರಂಭಿಸುತ್ತವೆ. ಸೂರ್ಯೋದಯದ ನಂತರ ಸುಮಾರು ಎರಡು ಗಂಟೆಗಳ ಕಾಲ ಅವು ಹೆಚ್ಚು ಚಟುವಟಿಕೆಯಿಂದ ಇರುವುದರಿಂದ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಭಾಗವಹಿಸಿದವರು ತಿಳಿಸಿದರು.
ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾತನಾಡಿದ ಸಂಯೋಜಕ ಡಾ. ಗಣೇಶ್ ಪ್ರಸಾದ್, ಪಕ್ಷಿಗಳು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಿಗೆ ಅರ್ಥಪೂರ್ಣ ಹವ್ಯಾಸದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಹಾಗೂ ಬೆಳಗಿನ ತಾಜಾ ಗಾಳಿಯಲ್ಲಿ ನಡಿಗೆಯ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದರು. ಅಲ್ಲದೆ, ಬೆಳಗಿನ ಸೂರ್ಯನ ಬೆಳಕಿನಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ದೊರೆಯುವಂತೆಯೂ ಈ ನಡಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.