ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಉಡುಪಿ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ವತಿಯಿಂದ ವಾರ್ಷಿಕ ಪರಮಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತ ರಾಜರ ಹಬ್ಬದ ಆಚರಣೆಯು ನವೆಂಬರ್ 22ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ನಡೆಯಲಿದೆ. 1925ರಲ್ಲಿ ಪೋಪ್ ಹನ್ನೊಂದನೇ ಪಯಸ್ ಅವರು ಜಗತ್ತಿನಲ್ಲಿ ಹೆಚ್ಚುತ್ತಿದ್ದ ಧರ್ಮನಿರಪೇಕ್ಷತೆ ಮತ್ತು ನಾಸ್ತಿಕತೆಯನ್ನು ಎದುರಿಸಲು ತಮ್ಮ ಕ್ವಾಸ್ ಪ್ರೈಮಾಸ್ ಎಂಬ ಸುತ್ತೋಲೆಯ ಮೂಲಕ ಈ ಹಬ್ಬವನ್ನು ಸ್ಥಾಪಿಸಿದರು. 

ಮಧ್ಯಾಹ್ನ 3 ಗಂಟೆಗೆ ಧರ್ಮಗುರು ಫಾ. ಶಾನ್ ಸಾವಿಯೊ ಅಂ ದ್ರಾದೆ ಅವರ ನೇತೃತ್ವದಲ್ಲಿ ಜಪಮಾಲೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಸಂಜೆ 3.30ಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಪವಿತ್ರ ಬಲಿಪೂಜೆ ನಡೆಯಲಿದೆ. 

ಬಲಿಪೂಜೆಯ ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಿದ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಮಿಲಾಗ್ರಿಸ್ ಕೆಥೆಡ್ರಲ್‌ನಿಂದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್‌ಗೆ ಕೊಂಡೊಯ್ಯಲಾಗುವುದು. ಅಲ್ಲಿ ಸಾರ್ವಜನಿಕರಿಗೆ ಪರಮಪ್ರಸಾದದ ದರ್ಶನ ಮತ್ತು ಆರಾಧನೆಗೆ ಅವಕಾಶ ಕಲ್ಪಿಸಲಾಗುವುದು. 

ಮೌಂಟ್ ರೋಸರಿ ಚರ್ಚ್ ಆವರಣದಲ್ಲಿ ಪಾಂಬೂರು ಚರ್ಚ್‌ನ ಧರ್ಮಗುರು ಫಾ. ಡಾ. ರೋಶನ್ ಡಿಸೋಜ ಅವರು ಆಧ್ಯಾತ್ಮಿಕ ಸಂದೇಶ ನೀಡಲಿದ್ದಾರೆ. ಬಳಿಕ ಧರ್ಮಾಧ್ಯಕ್ಷರಾದ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರಿಂದ ಆಶೀರ್ವಚನ ನೆರವೇರಲಿದೆ.