ಕೋಸ್ಟಲ್ ಟಾಕ್ ನ್ಯೂಸ್ | ಕಡಬ
ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿಅಂಕಕ್ಕೆ ಕಡಬ ಪೊಲೀಸರು ನವೆಂಬರ್ 9ರ ಸಂಜೆ ದಾಳಿ ನಡೆಸಿದ್ದು, ಐದು ಕೋಳಿಗಳು ಹಾಗೂ ಕೋಳಿಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿಅಂಕ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಡಬ ಪೊಲೀಸರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದರು. ಈ ವೇಳೆ ಹಲವರು ಗುಂಪು ಸೇರಿ ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ. ಪೊಲೀಸರನ್ನು ಕಂಡು ಜೂಜಾಟದಲ್ಲಿ ಭಾಗಿಯಾಗಿದ್ದವರು ಸ್ಥಳದಿಂದ ಪರಾರಿಯಾಗಿದ್ದು, ಕಡಬ ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನ ಬಳಿಯಿಂದ ಜೂಜಾಟದಲ್ಲಿ ಗಳಿಸಿದ ರೂ. 1,030 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿದ್ದ ಐದು ಹುಂಜಗಳು ಹಾಗೂ ಕೋಳಿಅಂಕಕ್ಕೆ ಬಳಸುತ್ತಿದ್ದ ಕತ್ತಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ತನಿಖೆ ಮುಂದುವರಿದಿದೆ.