ಕೋಸ್ಟಲ್ ಟಾಕ್ ನ್ಯೂಸ್ | ಕುಂದಾಪುರ 

ಪಶ್ಚಿಮ ಘಟ್ಟಗಳ ಪರ್ವತಶ್ರೇಣಿ, ಪ್ರಮುಖ ಶಿಖರಗಳು, ದಟ್ಟ ಅರಣ್ಯಗಳು ಹಾಗೂ ನದಿಗಳು ಮತ್ತು ತೊರೆಗಳ ವ್ಯಾಪಕ ಜಾಲವು ಕುಂದಾಪುರ ಅರಣ್ಯ ವಿಭಾಗದ ಪ್ರಮುಖ ಭೌಗೋಳಿಕ ವೈಶಿಷ್ಟ್ಯವಾಗಿದೆ. ಅರಣ್ಯ ಇಲಾಖೆಯ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಕುಂದಾಪುರ ಅರಣ್ಯ ವಿಭಾಗದಲ್ಲಿ ಒಟ್ಟು 36,013.05 ಹೆಕ್ಟೇರ್ ವ್ಯಾಪ್ತಿಯಲ್ಲಿ ಏಳು ವಿಧದ ಅರಣ್ಯಗಳಿವೆ. 

ತೇವಾಂಶವುಳ್ಳ ಮಿಶ್ರ ಪತನಶೀಲ ಅರಣ್ಯಗಳು (Deciduous Forests-ಸಾಮಾನ್ಯವಾಗಿ ಶೀತ ಅಥವಾ ಬೇಸಿಗೆಯ ಒಣ ಹವಾಮಾನ ಪ್ರಾರಂಭವಾಗುವ ಮುನ್ನ ತಮ್ಮ ಎಲೆಗಳನ್ನು ಉದುರಿಸುವ ವಿಶಾಲವಾದ ಎಲೆಯ ಮರಗಳನ್ನು ಹೊಂದಿರುವ ಕಾಡುಗಳು) ಅತಿ ಹೆಚ್ಚು, ಅಂದರೆ 10,411.73 ಹೆಕ್ಟೇರ್ ವ್ಯಾಪ್ತಿಯಲ್ಲಿವೆ. ಇದರ ನಂತರ ಲ್ಯಾಟರೈಟ್ ಅರೆ ನಿತ್ಯಹರಿದ್ವರ್ಣ ಅರಣ್ಯಗಳು 7,952.11 ಹೆಕ್ಟೇರ್ ಹಾಗೂ ಪಶ್ಚಿಮ ಕರಾವಳಿಯ ಅರೆ ನಿತ್ಯಹರಿದ್ವರ್ಣ ಅರಣ್ಯಗಳು 7,795.65 ಹೆಕ್ಟೇರ್ ವ್ಯಾಪ್ತಿಯಲ್ಲಿವೆ. ಇದರೊಂದಿಗೆ ಉಷ್ಣವಲಯದ ನಿತ್ಯಹರಿದ್ವರ್ಣ ಅರಣ್ಯಗಳು, ನಿತ್ಯಹರಿದ್ವರ್ಣ ಡಿಪ್ಟೆರೊಕಾರ್ಪಸ್ ಅರಣ್ಯಗಳು, ಲ್ಯಾಟರೈಟ್ ಕುರುಚಲು ಅರಣ್ಯಗಳು ಹಾಗೂ ಒಣ ಹುಲ್ಲುಗಾವಲುಗಳೂ ಈ ವಿಭಾಗದಲ್ಲಿವೆ. 

1970 ಮತ್ತು 1980ರ ದಶಕಗಳಲ್ಲಿ ನೈಸರ್ಗಿಕ ಅರಣ್ಯಗಳನ್ನು ತೆರವುಗೊಳಿಸಿ ಗೋಡಂಬಿ ತೋಟಗಳನ್ನು ಬೆಳೆಸಲು ದೊಡ್ಡ ಪ್ರಮಾಣದ ಅರಣ್ಯ ಪ್ರದೇಶಗಳನ್ನು ವರ್ಗಾಯಿಸಲಾಗಿತ್ತು. ಇದರಿಂದ ನೈಸರ್ಗಿಕ ಅರಣ್ಯ ಪ್ರದೇಶವೂ ಕಡಿಮೆಯಾಗಿತ್ತು ಎಂದು ದಾಖಲೆಗಳು ತಿಳಿಸುತ್ತವೆ.