ಕೋಸ್ಟಲ್ ಟಾಕ್ ನ್ಯೂಸ್ | ನವದೆಹಲಿ

ರಾಜ್ಯದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿ ಶೇ. 26ರಿಂದ 31ರಷ್ಟು ಎಥನಾಲ್ ಅಂಶವಿದೆ ಎಂದು ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಶನಿವಾರ ಗಮನಕ್ಕೆ ತೆಗೆದುಕೊಂಡಿದೆ.

ಈ ಕುರಿತು ಸಾರ್ವಜನಿಕ ವಲಯದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸ್ಪಷ್ಟನೆ ನೀಡಿವೆ. ವರದಿಯಾಗಿರುವ ಆರೋಪಗಳಿಗೆ ಉತ್ತರ ನೀಡಿ, ಅವು ನಿಗದಿತ ಮತ್ತು ತಾಂತ್ರಿಕ ಪ್ರಕ್ರಿಯೆಗಳ ಪ್ರಕಾರ ನಡೆಸಿದ ಪರೀಕ್ಷೆಗಳಲ್ಲ ಎಂದು ಕಂಪನಿಗಳು ತಿಳಿಸಿವೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ಮೂರು ಕಂಪನಿಗಳು ಪೂರೈಸುವ ಇ20 ಪೆಟ್ರೋಲ್, ಭಾರತೀಯ ಮಾನಕ ಬ್ಯೂರೋ ನಿಗದಿಪಡಿಸಿರುವ ಎಥನಾಲ್ ಮಿಶ್ರಿತ ಮೋಟಾರ್ ಗ್ಯಾಸೋಲಿನ್‌ನ ಐಎಸ್ 17021 ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಸ್ಪಷ್ಟಪಡಿಸಿವೆ.

ಅಕ್ಟೋಬರ್ 2026ರಲ್ಲಿ ನಡೆಸಲಾದ ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆಯೂ ತೈಲ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ವರದಿಯಾಗಿರುವ ಎಥನಾಲ್ ಪ್ರಮಾಣವನ್ನು ಪರಿಶೀಲಿಸಲು ನಿಗದಿತ ಮಾನದಂಡಗಳ ಅಡಿಯಲ್ಲಿ ಜಂಟಿ ಮಾದರಿ ಸಂಗ್ರಹಣೆ ಮತ್ತು ಮತ್ತೆ ಪರೀಕ್ಷೆ ನಡೆಸುವಂತೆ ಕಂಪನಿಗಳು ಒತ್ತಾಯಿಸಿವೆ.

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುವ ಇ20 ಪೆಟ್ರೋಲ್ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿದೆ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 893 ಮಾದರಿಗಳನ್ನು ಪರೀಕ್ಷಿಸಿದಾಗ ಅವೆಲ್ಲವೂ ಮಾನದಂಡಗಳಿಗೆ ಅನುಗುಣವಾಗಿರುವುದು ದೃಢಪಟ್ಟಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.

ತೈಲ ಸಂಸ್ಕರಣಾಗಾರಗಳು ಮತ್ತು ಡಿಪೋಗಳಲ್ಲಿ ಎಥನಾಲ್ ಮಿಶ್ರಣವನ್ನು ವ್ಯವಸ್ಥಿತ, ಹಾಗೂ ನಿಯಂತ್ರಿತ ವ್ಯವಸ್ಥೆಗಳ ಮೂಲಕ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ವಯಂಚಾಲಿತ ಮತ್ತು ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡುವ ವ್ಯವಸ್ಥೆಗಳಿದ್ದು, ನಿಗದಿತ ಗುಣಮಟ್ಟದ ಮಾನದಂಡಗಳು ಹಾಗೂ ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತದೆ. ಪೆಟ್ರೋಲ್‌ಗೆ ಎಥನಾಲ್ ಅನ್ನು ಕೈಯಾರೆ ಅಥವಾ ಮನಬಂದಂತೆ ಸೇರಿಸುವ ಪ್ರಕ್ರಿಯೆ ಇದಲ್ಲ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ.