ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಉಡುಪಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಲೈಫ್ ಎಸೆನ್ಷಿಯಲ್ಸ್ ವಾಟರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳಿಗಾಗಿ ಕಡಿಮೆ ಇಂಧನ ಬಳಕೆ ಮಾಡುವ ನವೀನ ಸಾಧನವನ್ನು ಅಭಿವೃದ್ಧಿಪಡಿಸುವ ಉದ್ದೇಶಕ್ಕೆ ಕರ್ನಾಟಕ ಸರ್ಕಾರದ ‘ಎಲಿವೇಟ್ ಆಸ್ಪೈರ್ 2026’ ಯೋಜನೆಯಡಿ 33 ಲಕ್ಷ ರೂ. ಅನುದಾನವನ್ನು ಪಡೆದುಕೊಂಡಿದೆ.
ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯ ಎಂಜಿನಿಯರ್ ರಿತ್ವಿಕ್ ನಾಯಕ್ ಅಮ್ಮುಂಜೆ ಅವರ ನೇತೃತ್ವದಲ್ಲಿ ಈ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕಾರ್ಯವೈಖರಿಯಲ್ಲಿ ಬದಲಾವಣೆ ತರುವ ಗುರಿಯನ್ನು ಈ ಆವಿಷ್ಕಾರ ಹೊಂದಿದೆ. ಪ್ರಸ್ತುತ ಬಳಕೆಯಲ್ಲಿರುವ ಹಾಗೂ ಹೊಸದಾಗಿ ನಿರ್ಮಾಣವಾಗುವ ತ್ಯಾಜ್ಯ ಸಂಸ್ಕರಣಾ ಘಟಕಗಳು (ಎಸ್ಟಿಪಿ) ಮತ್ತು ಕೈಗಾರಿಕಾ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ (ಇಟಿಪಿ) ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದರೊಂದಿಗೆ ಸಂಸ್ಕರಣೆಯ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.
ಕಡಿಮೆ ವೆಚ್ಚ ಮತ್ತು ಕಡಿಮೆ ಸ್ಥಳಾವಕಾಶದಲ್ಲಿ ಅಳವಡಿಸಬಹುದಾದ ಸಾಧನವನ್ನು, ಮತ್ತು ತಂತ್ರಜ್ಞಾನವನ್ನು ರೂಪಿಸಲಾಗುತ್ತಿದೆ. ವಿಶೇಷವಾಗಿ ಸ್ಥಳಾವಕಾಶದ ಕೊರತೆಯಿರುವ ಸಂಸ್ಕರಣಾ ಘಟಕಗಳಿಗೆ ಇದು ಅನುಕೂಲವಾಗಲಿದೆ. ಇಂಧನ ಬಳಕೆ ಹಾಗೂ ಮೂಲಸೌಕರ್ಯ ವೆಚ್ಚವನ್ನು ತಗ್ಗಿಸುವ ಮೂಲಕ ತ್ಯಾಜ್ಯ ನೀರಿನ ಮರುಬಳಕೆಯನ್ನು ಹೆಚ್ಚು ಸುಲಭ ಮತ್ತು ಆರ್ಥಿಕವಾಗಿ ಕಾರ್ಯಸಾಧ್ಯವಾಗಿಸುವ ಗುರಿಯನ್ನು ಹೊಂದಿದೆ.
ರಿತ್ವಿಕ್ ನಾಯಕ್ ಅಮ್ಮುಂಜೆ ಅವರು ಮಣಿಪಾಲದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಅಲ್ಲಿಯೇ ಬಿಇ ಮತ್ತು ಎಂಟೆಕ್ ಪದವಿಗಳನ್ನು ಪಡೆದಿದ್ದಾರೆ. ನೀರು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅವರು, ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್), ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕಾಪು ಪುರಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಹಲವು ಸಂಸ್ಥೆಗಳ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಕರಾವಳಿ ಭಾಗದ ಹಲವು ಖಾಸಗಿ ಸಂಸ್ಥೆಗಳಿಗೂ ಸೇವೆ ಸಲ್ಲಿಸಿದ್ದಾರೆ. ಕಂಪನಿಯು ಮಣಿಪಾಲದ ಕರ್ನಾಟಕ ಸರ್ಕಾರದ ಬಯೋ ಇನ್ಕ್ಯುಬೇಟರ್ನಲ್ಲಿಯೂ ಇನ್ಕ್ಯುಬೇಟ್ ಆಗಿದ್ದು, ತಂತ್ರಜ್ಞಾನ ಅಭಿವೃದ್ಧಿಗೆ ಅಲ್ಲಿನ ಬೆಂಬಲ ದೊರೆತಿದೆ.
ಅನುದಾನ ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ರಿತ್ವಿಕ್ ನಾಯಕ್ ಅಮ್ಮುಂಜೆ, "ಹಲವು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ, ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಇಂಧನ ದಕ್ಷತೆಯುಳ್ಳ ನೀರು ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಪರಿಹಾರಗಳು ನಮ್ಮ ದೇಶಕ್ಕೆ ಇಂದಿನ ಅಗತ್ಯ ಎಂಬುದನ್ನು ಅರಿತುಕೊಂಡಿದ್ದೇನೆ. ಸಾಂಪ್ರದಾಯಿಕ ಸಂಸ್ಕರಣಾ ತಂತ್ರಜ್ಞಾನಗಳಿಗೆ ಹೆಚ್ಚಿನ ಬಂಡವಾಳ, ಸಾಕಷ್ಟು ಸ್ಥಳಾವಕಾಶ ಮತ್ತು ಹೆಚ್ಚಿನ ವಿದ್ಯುತ್ ಬಳಕೆ ಅಗತ್ಯವಿದೆ. ಇವುಗಳಲ್ಲಿ ಬಹುತೇಕ ತಂತ್ರಜ್ಞಾನಗಳನ್ನು ವಿದೇಶಗಳಿಂದ ಅಳವಡಿಸಿಕೊಳ್ಳಲಾಗಿದೆ. ಈ ಸವಾಲುಗಳಿಗೆ ಪರಿಹಾರ ಒದಗಿಸುವ ಪ್ರಾಯೋಗಿಕ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿ, ತ್ಯಾಜ್ಯ ನೀರಿನ ಮರುಬಳಕೆಯನ್ನು ಹೆಚ್ಚು ಸುಸ್ಥಿರ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿಸುವುದು ನಮ್ಮ ಉದ್ದೇಶ" ಎಂದರು. ನದಿಗಳು ಮತ್ತು ಅಂತರ್ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಉತ್ತಮ ತ್ಯಾಜ್ಯ ನೀರು ನಿರ್ವಹಣೆ, ಮರುಬಳಕೆಗೆ ಹೆಚ್ಚಿನ ಆದ್ಯತೆ ಹಾಗೂ ನವೀನ ತಂತ್ರಜ್ಞಾನಗಳ ಅಳವಡಿಕೆ ಅಗತ್ಯವಿದೆ ಎಂದು ಅವರು ಹೇಳಿದರು. ‘ಎಲಿವೇಟ್ ಆಸ್ಪೈರ್ 2026’ ಯೋಜನೆಯಡಿ ದೊರೆತಿರುವ 33 ಲಕ್ಷ ರೂ. ಅನುದಾನವು ಕಂಪನಿಯ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಸ್ವದೇಶಿ ತಂತ್ರಜ್ಞಾನದ ಮತ್ತಷ್ಟು ಅಭಿವೃದ್ಧಿ ಮತ್ತು ಉನ್ನತೀಕರಣಕ್ಕೆ ನೆರವಾಗಲಿದೆ ಎಂದು ರಿತ್ವಿಕ್ ನಾಯಕ್ ತಿಳಿಸಿದರು.