ಕೋಸ್ಟಲ್ ಟಾಕ್ ನ್ಯೂಸ್ | ಬೆಳ್ತಂಗಡಿ 

ಬೆಳ್ತಂಗಡಿಯ ಚರ್ಚ್ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಗೂಡ್ಸ್ ವಾಹನ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ದೂರಿನ ಪ್ರಕಾರ, ನಾವೂರು ನಿವಾಸಿ ಸಂತೋಷ್ ಜೆ. ಅವರು ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಮೋಹನ್ ಅವರು ಇನ್ನೊಂದು ದ್ವಿಚಕ್ರ ವಾಹನದಲ್ಲಿ ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆಗೆ ಪ್ರಯಾಣಿಸುತ್ತಿದ್ದರು. 

ಬೆಳ್ತಂಗಡಿ ಕಸಬಾ ಗ್ರಾಮದ ಚರ್ಚ್ ಕ್ರಾಸ್ ಬಳಿ ತಲುಪುತ್ತಿದ್ದಂತೆ, ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನವು ಎರಡೂ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಗೂಡ್ಸ್ ವಾಹನವನ್ನು ಪುನೀತ್ ಎಂಬವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಸಂತೋಷ್ ಮತ್ತು ಮೋಹನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಕುರಿತು ಸಂತೋಷ್ ಜೆ ಅವರ ಸಹೋದರ, ನಾವೂರು ನಿವಾಸಿ ನವೀನ್ ಎಸ್. (39) ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.