ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ 

ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಬೇಡ , ಉಡುಪಿ ಜಿಲ್ಲಾಸ್ಪತ್ರೆ ಸಂಪೂರ್ಣ ಸಿದ್ಧವಾದ ನಂತರವೇ ಉದ್ಘಾಟನೆ ಮಾಡಬೇಕು ಎಂದು ಸುಜಯ್ ಪೂಜಾರಿ, ಜಿಲ್ಲಾಧ್ಯಕ್ಷರು, ನಮ್ಮ ಕರ್ನಾಟಕ ಸೇನೆ, ಉಡುಪಿ ಜಿಲ್ಲೆ, ಅವರು ಹೇಳಿದ್ದಾರೆ. 

ಉಡುಪಿಯ ನೂತನ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಸುಮಾರು ₹110 ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗಿದ್ದು, ಸುಮಾರು 250 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯ ಎಲ್ಲಾ ಕಾಮಗಾರಿಗಳು ಹಾಗೂ ವೈದ್ಯಕೀಯ ಸೌಲಭ್ಯಗಳು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಆಸ್ಪತ್ರೆಯ ಕಟ್ಟಡ ನಿರ್ಮಾಣವಾದರೆ ಮಾತ್ರ ಸಾಲದು. ಅಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತಹ ಎಲ್ಲಾ ಮೂಲಭೂತ ಸೌಲಭ್ಯಗಳು ಇರಬೇಕು. ಅಗತ್ಯ ವೈದ್ಯರು, ನರ್ಸ್‌ಗಳು, ತಜ್ಞ ವೈದ್ಯಕೀಯ ಸಿಬ್ಬಂದಿ, ಡಿ-ಗ್ರೂಪ್ ನೌಕರರು ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಪೂರ್ಣಗೊಳ್ಳಬೇಕು. ಅದೇ ರೀತಿ ಸ್ಕ್ಯಾನಿಂಗ್ ಯಂತ್ರಗಳು, ಡಯಾಲಿಸಿಸ್ ಯಂತ್ರಗಳು ಸೇರಿದಂತೆ ಎಲ್ಲಾ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಬೇಕು. ಹಳೆಯದಾಗಿ ಹಾಳಾಗಿರುವ ಅಥವಾ ಸಮರ್ಪಕವಾಗಿ ಕಾರ್ಯನಿರ್ವಹಿಸದ ಡಯಾಲಿಸಿಸ್ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರಗಳನ್ನು ಅಳವಡಿಸಬೇಕು. ಸುಮಾರು 250 ಹಾಸಿಗೆಗಳ ಆಸ್ಪತ್ರೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಿರುವ ವೈದ್ಯರು, ನರ್ಸ್‌ಗಳು ಮತ್ತು ಇತರ ಸಿಬ್ಬಂದಿಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಬೇಕು. ಸಿಬ್ಬಂದಿ ಕೊರತೆಯೊಂದಿಗೆ ಆಸ್ಪತ್ರೆಯನ್ನು ಉದ್ಘಾಟಿಸುವುದರಿಂದ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ, ಎಂದು ಅವರು ಹೇಳಿದ್ದಾರೆ. 

ಆಸ್ಪತ್ರೆಯ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು, ಅಗತ್ಯವಿರುವ ವೈದ್ಯರು ಮತ್ತು ನರ್ಸ್‌ಗಳ ನೇಮಕಾತಿ ಮಾಡಬೇಕು, ಎಲ್ಲಾ ವೈದ್ಯಕೀಯ ಯಂತ್ರೋಪಕರಣಗಳನ್ನು ಅಳವಡಿಸಿ ಕಾರ್ಯಾರಂಭಕ್ಕೆ ಸಿದ್ಧಪಡಿಸಬೇಕು, ಹಳೆಯ ಮತ್ತು ಕೆಟ್ಟ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರಗಳನ್ನು ಅಳವಡಿಸಬೇಕು, ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು, 250 ಹಾಸಿಗೆಗಳ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆಸ್ಪತ್ರೆ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಮತ್ತೆ ಸಮಸ್ಯೆ ಎದುರಿಸುವಂತಾಗಬಾರದು. ಜನರ ತೆರಿಗೆ ಹಣದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ ದೀರ್ಘಕಾಲ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡುವಂತೆ ಸಿದ್ಧವಾಗಬೇಕು, ಎಂದು ಅವರು ಹೇಳಿದ್ದಾರೆ.