ಪ್ರಕಾಶ್ ಸಾಮಗ
ಕೋಸ್ಟಲ್ ಟಾಕ್ ನ್ಯೂಸ್ | ಉಡುಪಿ
ಉಡುಪಿ ಜಿಲ್ಲೆಯ ಆಹಾರ ಧಾನ್ಯ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಭಾರತೀಯ ಆಹಾರ ನಿಗಮ (ಎಫ್ಸಿಐ) ಮುಂದಾಗಿದೆ. ಪೆರಂಪಳ್ಳಿಯಲ್ಲಿರುವ ಎಫ್ಸಿಐ ಆಹಾರ ಸಂಗ್ರಹಣಾ ಡಿಪೋದಲ್ಲಿ ಹೊಸ ಗೋದಾಮು ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ‘ಆಸ್ತಿ ನಗದೀಕರಣ ನೀತಿ’ ಯಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಿಂದ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ವಿತರಣೆ ಸುಗಮವಾಗಲಿದೆ.
ಪೆರಂಪಳ್ಳಿಯಲ್ಲಿರುವ ಆಹಾರ ಸಂಗ್ರಹಣಾ ಡಿಪೋ ಎಫ್ಸಿಐ ಒಡೆತನದಲ್ಲಿದ್ದು, ಇಲ್ಲಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ. ಇದೀಗ ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಗೋದಾಮು 10,020 ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯ ಹೊಂದಿರಲಿದೆ. ಶೀಘ್ರದಲ್ಲೇ ನಿರ್ಮಾಣ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಕೋಸ್ಟಲ್ ಟಾಕ್ ನ್ಯೂಸ್ ಗೆ ತಿಳಿಸಿವೆ.
ಈ ಯೋಜನೆಯ ಪ್ರಸ್ತಾವನೆ ಕುರಿತು 2026ರ ಫೆಬ್ರವರಿ 18ರಂದು ಬೆಂಗಳೂರಿನ ಎಫ್ಸಿಐ ಪ್ರಾದೇಶಿಕ ಕಚೇರಿಯಲ್ಲಿ ನಡೆದ ರಾಜ್ಯಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನ ಹಂತಗಳನ್ನು ಪೂರ್ಣಗೊಳಿಸಿರುವ ದಾವಣಗೆರೆ ಮೂಲದ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ದೊರೆಯುವ ಸಾಧ್ಯತೆಯಿದೆ. ಟೆಂಡರ್ ಅಂತಿಮಗೊಂಡ ಬಳಿಕ ಒಂದು ವರ್ಷದೊಳಗೆ ಗೋದಾಮು ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಟೆಂಡರ್ ಪ್ರಕ್ರಿಯೆಯಲ್ಲಿ ಮತ್ತೊಬ್ಬ ಬಿಡ್ಡರ್ ದೀಪಕ್ ಸರ್ದಾನ ಅವರು ತಮ್ಮ ಸಂಸ್ಥೆಯನ್ನು ತಾಂತ್ರಿಕ ಹಂತದಲ್ಲಿ ಅನರ್ಹಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಎಸ್ಟಿ ಸಂಖ್ಯೆ ಮತ್ತು ಎಚ್ಎಸ್ಎನ್ ಕೋಡ್ ಸಲ್ಲಿಸದ ಕಾರಣ ತಮ್ಮ ಸಂಸ್ಥೆಯನ್ನು ಅನರ್ಹಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದರು. ಉತ್ತರ ವಲಯದಲ್ಲಿ ಆಹ್ವಾನಿಸಲಾಗಿದ್ದ ಕೆಲವು ಟೆಂಡರ್ಗಳಲ್ಲಿ ಇಂತಹ ದಾಖಲೆಗಳನ್ನು ಕಡ್ಡಾಯಗೊಳಿಸಿರಲಿಲ್ಲ ಎಂಬುದು ಅವರ ವಾದವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಫ್ಸಿಐ ದಕ್ಷಿಣ ವಲಯದ ಕಾರ್ಯನಿರ್ವಾಹಕ ನಿರ್ದೇಶಕರು, ಜಿಎಸ್ಟಿ ಸಂಖ್ಯೆ ಮತ್ತು ಎಚ್ಎಸ್ಎನ್ ಕೋಡ್ ಕಡ್ಡಾಯ ದಾಖಲೆಗಳಾಗಿದ್ದು, ತಾಂತ್ರಿಕ ಮೌಲ್ಯಮಾಪನದ ವೇಳೆ ಈ ನಿಯಮದಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಮೂರು ಗೋದಾಮುಗಳಿವೆ. ಇವುಗಳಲ್ಲಿ ಎರಡು ಕೇಂದ್ರ ಉಗ್ರಾಣ ನಿಗಮದ ಒಡೆತನದಲ್ಲಿದ್ದು, ಮಣ್ಣಗುಡ್ಡ ಮತ್ತು ಪಣಂಬೂರಿನಲ್ಲಿವೆ. ಮತ್ತೊಂದು ಗೋದಾಮು ಮಂಗಳೂರಿನಲ್ಲಿದ್ದು, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಒಡೆತನದಲ್ಲಿದೆ. ಈ ಮೂರೂ ಗೋದಾಮುಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಡುಪಿಯ ಪೆರಂಪಳ್ಳಿ ಡಿಪೋ ಎಫ್ಸಿಐ ಒಡೆತನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಗೋದಾಮುಗಳಲ್ಲಿ ಸಾಕಷ್ಟು ಸಂಗ್ರಹ ಸಾಮರ್ಥ್ಯ ಇರುವುದರಿಂದ ಕೇಂದ್ರ ಸರ್ಕಾರದ ಆಸ್ತಿ ನಗದೀಕರಣ ಯೋಜನೆಯಡಿ, ಜಿಲ್ಲೆಯನ್ನು ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.