ಕೋಸ್ಟಲ್ ಟಾಕ್ ನ್ಯೂಸ್
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ರಾಜಕೀಯ ಪ್ರಚಾರ, ಕೆಸರೆರಚಾಟಕ್ಕೆ ಸೀಮಿತವಲ್ಲ. ಜನರ ವಿಶ್ವಾಸ, ಜನಪ್ರತಿನಿಧಿಗಳ ಹೊಣೆಗಾರಿಕೆ ಅದರ ಪ್ರಮುಖ ಆಧಾರಸ್ತಂಭಗಳು. ಆದರೆ ಬದಲಾಗುತ್ತಿರುವ ರಾಜಕೀಯ, ನಾಯಕತ್ವದ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ನಾಯಕತ್ವವು ಜನರ ವಿಶ್ವಾಸ, ಸಾಮಾಜಿಕ ಬದ್ಧತೆ ಮತ್ತು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಆಧಾರದಲ್ಲಿ ರೂಪುಗೊಳ್ಳಬೇಕು. ಆದರೆ ರಾಜಕೀಯದ ಸ್ವರೂಪ ಬದಲಾಗುತ್ತಿದೆ. ಕುಟುಂಬದ ಹಿನ್ನೆಲೆ, ಜಾತಿ ಸಮೀಕರಣ, ಆರ್ಥಿಕ ಬಲ ಮತ್ತು ರಾಜಕೀಯ ಸಂಪರ್ಕಗಳು ಚುನಾವಣಾ ಅವಕಾಶಗಳನ್ನು ನಿರ್ಧರಿಸುವಲ್ಲಿ ಪ್ರಭಾವ ಬೀರುತ್ತಿದೆ. ರಾಜಕೀಯ ಚರ್ಚೆಯ ಪ್ರಮುಖ ವಿಷಯವಾಗಿದ್ದ ಸ್ವಜನಪಕ್ಷಪಾತದ ವಿರುದ್ಧ ಈಗ ಯಾವುದೇ ರಾಜಕೀಯ ಪಕ್ಷವೂ ಸಂಪೂರ್ಣ ಮುಕ್ತವಾಗಿದೆ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ರಾಜಕೀಯ ಪಕ್ಷಗಳಾ ಗಳಲ್ಲಿ ಕುಟುಂಬ ಮತ್ತು ಸಂಬಂಧಗಳು, ರಾಜಕೀಯ ಪ್ರವೇಶ ಹಾಗೂ ನಾಯಕತ್ವದ ಅವಕಾಶಗಳನ್ನು ರೂಪಿಸುವಲ್ಲಿ ಪಾತ್ರ ವಹಿಸುತ್ತಿವೆ. ಪ್ರಭಾವಿ ನಾಯಕರೊಂದಿಗಿನ ಸಂಪರ್ಕವೂ ರಾಜಕೀಯ ಬೆಳವಣಿಗೆಗೆ ನೆರವಾಗುವ ಅಂಶವಾಗಿ ಕಾಣುತ್ತಿದೆ.
ಜನಪ್ರತಿನಿಧಿಗಳು ಮತ್ತು ಸ್ಥಳೀಯ ಜನರ ನಡುವಿನ ಅಂತರವೂ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಚುನಾಯಿತ ಪ್ರತಿನಿಧಿಗಳು ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಜನರ ಅಗತ್ಯಗಳಿಗೆ ಸ್ಪಂದಿಸಬೇಕೆಂಬ ನಿರೀಕ್ಷೆ ಇರುತ್ತದೆ. ಸ್ವತಂತ್ರವಾಗಿ ಆಲೋಚಿಸಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವೂ ಅವರಿಗಿರಬೇಕು. ಆದರೆ ಪಕ್ಷದ ವರಿಷ್ಠರ ಸೂಚನೆಗಳ ಮೇಲಿನ ಅತಿಯಾದ ಅವಲಂಬನೆ ಈ ಜವಾಬ್ದಾರಿಯನ್ನು ದುರ್ಬಲಗೊಳಿಸುತ್ತಿದೆ. ಪಕ್ಷ ನಿಷ್ಠೆ ಸ್ವತಂತ್ರ ಚಿಂತನೆಗೆ ಅಡ್ಡಿಯಾಗಬಾರದು. ಜನರಿಂದ ಆಯ್ಕೆಯಾದ ನಾಯಕರು ಜನರ ಪರವಾಗಿ ಮಾತನಾಡುವ ಬದಲು ವರಿಷ್ಠರ ಸೂಚನೆಗಳನ್ನು ಪಾಲಿಸುವುದಕ್ಕೆ ಸೀಮಿತರಾದರೆ ಪ್ರಜಾಪ್ರಭುತ್ವದ ಆಶಯವೇ ದುರ್ಬಲವಾಗುತ್ತದೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಾಗರಿಕರ ಪಾತ್ರವೂ ಮಹತ್ವದ್ದು. ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸದ ಸಮಾಜವು ತನ್ನದೇ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದುರ್ಬಲಗೊಳಿಸುವ ಅಪಾಯವಿದೆ.
ಸಾರ್ವಜನಿಕ ಹೊಣೆಗಾರಿಕೆ ಚುನಾವಣೆಯ ಅವಧಿಗೆ ಮಾತ್ರ ಸೀಮಿತವಾಗಬಾರದು. ಗ್ರಾಮ ಪಂಚಾಯತ್ ಸದಸ್ಯರು, ಪುರಸಭೆ ಮತ್ತು ನಗರಸಭೆ ಸದಸ್ಯರು, ಕಾರ್ಪೊರೇಟರ್ಗಳು, ಶಾಸಕರು ಹಾಗೂ ಸಂಸದರನ್ನು ಅವರ ಅಧಿಕಾರಾವಧಿಯುದ್ದಕ್ಕೂ ಜನರು ಪ್ರಶ್ನಿಸಬೇಕು. ಅಭಿವೃದ್ಧಿ ಕಾರ್ಯಗಳು, ಸಾರ್ವಜನಿಕ ಸೇವೆಗಳು, ಮೂಲಸೌಕರ್ಯ ಮತ್ತು ಆಡಳಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ಪ್ರಜಾಪ್ರಭುತ್ವದ ಮೂಲಭೂತ ಜವಾಬ್ದಾರಿ. ಆದರೆ ರಾಜಕೀಯ ಹೊಂದಾಣಿಕೆ ಮತ್ತು ಮೌನದ ಸಂಸ್ಕೃತಿ ಈ ಸಂಬಂಧವನ್ನು ಕ್ರಮೇಣ ದುರ್ಬಲಗೊಳಿಸುತ್ತಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಗುರುತಿಸಲ್ಪಡುವ ಮಾಧ್ಯಮಗಳಿಗೂ ಮಹತ್ವದ ಜವಾಬ್ದಾರಿಯಿದೆ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಮಾಧ್ಯಮಗಳು ಅತ್ಯಗತ್ಯ. ಮಾಧ್ಯಮ ಸಂಸ್ಥೆಗಳಿಂದ ಒತ್ತಡಗಳು ಮತ್ತು ಮಾಧ್ಯಮ ಸಂಸ್ಥೆಗಳು ಸರ್ಕಾರದ ಜಾಹೀರಾತಿನ ಮೇಲೆ ಹೆಚ್ಚಾಗಿ ಅವಲಂಬಿತವಾಗುತ್ತಿರುವುದು ಕಳವಳಕಾರಿ. ಅಧಿಕಾರವನ್ನು ಪ್ರಶ್ನಿಸಲು ಸಾಧ್ಯವಾಗದ ಮಾಧ್ಯಮವು ತನ್ನ ಪ್ರಜಾಸತ್ತಾತ್ಮಕ ಪಾತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವೆಂದರೆ ಕೇವಲ ಸರ್ಕಾರವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲ. ಆಯ್ಕೆಯಾದವರು ಜನರಿಗೆ ಉತ್ತರದಾಯಿಗಳಾಗಿರುವುದನ್ನು ಖಚಿತಪಡಿಸುವ ವ್ಯವಸ್ಥೆ. ರಾಜಕೀಯ ನಾಯಕತ್ವ ಹೊಣೆಗಾರಿಕೆಯಿಂದ ಕೂಡಿರಬೇಕು, ಮಾಧ್ಯಮ ಸಂಸ್ಥೆಗಳು ಸ್ವತಂತ್ರವಾಗಿರಬೇಕು ಮತ್ತು ನಾಗರಿಕರು ಪ್ರಶ್ನಿಸುವ ಧೈರ್ಯವನ್ನು ಉಳಿಸಿಕೊಳ್ಳಬೇಕು. ಈ ಅಂಶಗಳು ದುರ್ಬಲಗೊಂಡರೆ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ, ಅವುಗಳ ಆಶಯ, ಉದ್ದೇಶ ಕ್ರಮೇಣ ಕಳೆದುಹೋಗುವ ಅಪಾಯವಿದೆ.